ಅಬುಧಾಬಿ: ಲೀಗ್ ಪಂದ್ಯಗಳು ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ ಪ್ಲೇ-ಆಫ್ ಲೆಕ್ಕಾಚಾರ ರೋಚಕಗೊಳ್ಳುತ್ತಿದ್ದು, ಚೆನ್ನೈ ತಂಡವನ್ನು ಎದುರಿಸಲುರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಭವಿಷ್ಯ ಇಂದು ನಿರ್ಧಾರವಾಗಲಿದೆ.
13 ಪಂದ್ಯಗಳಿಂದ 12 ಪಾಯಿಂಟ್ಸ್ ಪಡೆದು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಪಂಜಾಬ್ ಇಂದಿನ ಪಂದ್ಯ ಗೆದ್ದರಷ್ಟೇ ಪ್ಲೇ ಆಫ್ ರೇಸ್ನಲ್ಲಿ ಜೀವಂತವಾಗಿರಲಿದೆ. ಈ ಪಂದ್ಯದಲ್ಲಿ ಜಯಿಸಿದರೂ, ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತವಾಗುವುದಿಲ್ಲ. ಇತರ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ. ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ಗೆ ಇದೊಂದು ಔಪಚಾರಿಕ ಪಂದ್ಯವಾಗಿದೆ.
ಸತತ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಪಂಜಾಬ್ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಸೋಲು ಕಂಡಿತ್ತು. ಕ್ರಿಸ್ ಗೇಲ್, ರಾಹುಲ್, ಪೂರನ್ ಉತ್ತಮ ಫಾರ್ಮ್ನಲ್ಲಿರುವುದು ತಂಡಕ್ಕೆ ವರವಾಗಿದೆ.
ಮೊಹಮ್ಮದ್ ಶಮಿ ಮತ್ತು ರವಿ ಬಿಷ್ಣೋಯಿ, ಎಂ.ಅಶ್ವಿನ್, ಅರ್ಷ್ದೀಪ್ ಸಿಂಗ್, ಕ್ರಿಸ್ ಜೋರ್ಡನ್ ಬೌಲಿಂಗ್‌ನಲ್ಲಿ ಕಮಾಲ್ ಮಾಡುತ್ತಿದ್ದು, ಪಂಜಾಬ್ಗೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ಪಂದ್ಯಗಳನ್ನಾಡಿದ್ದು 5 ಗೆಲುವು ಹಾಗೂ 8 ಸೋಲುಗಳೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಯುವ ಆಟಗಾರ ರುತುರಾಜ್ ಗಾಯಕ್ವಾಡ್, ಪ್ಲೆಸಿಸ್, ರಾಯುಡು ಮತ್ತು ಧೋನಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಬೌಲಿಂಗ್‌ನಲ್ಲಿ ದೀಪಕ್ ಚಾಹರ್, ಸ್ಯಾಮ್ ಕರ್ರನ್, ಸ್ಯಾಂಟ್ನರ್, ಕರಣ್ ಶರ್ಮಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.