ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದ ಅಮೆರಿಕದ ಮೊದಲ ಕ್ರಿಕೆಟರ್ ಅಲಿ ಖಾನ್ ಗಾಯದಿಂದಾಗಿ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಗಾಯದ ಕಾರಣ ಐಪಿಎಲ್ನಿಂದ ಹೊರ ಬಿದ್ದಿದ್ದ ಇಂಗ್ಲೆಂಡ್ ವೇಗಿ ಹ್ಯಾರಿ ಗರ್ನೆ ಬದಲಿಗೆ ಅಮೆರಿಕ ತಂಡದ ವೇಗದ ಬೌಲರ್ ಅಲಿ ಖಾನ್, ಕೆಕೆಆರ್ ತಂಡ ಸೇರ್ಪಡೆಗೊಂಡಿದ್ದರು.
'ಗಾಯಗೊಂಡ ಹ್ಯಾರಿ ಗರ್ನಿ ಬದಲಿಯಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅಲಿ ಖಾನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಅಲಿ ಖಾನ್ ಐಪಿಎಲ್ ಫ್ರ್ಯಾಂಚೈಸಿ ಜೊತೆ ಒಪ್ಪಂದ ಮಾಡಿಕೊಂಡ ಮೊದಲ ಯುಎಸ್ಎ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ದುರದೃಷ್ಟವಶಾತ್ ಖಾನ್ ಗಾಯಗೊಂಡಿದ್ದು, ಉಳಿದ 2020ರ ಐಪಿಎಲ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ' ಎಂದು ಐಪಿಎಲ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಅಲಿ ಖಾನ್ ಇಲ್ಲಿಯವರೆಗೆ ಕೆಕೆಆರ್ ಆಡಿದ ನಾಲ್ಕು ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ.
ಶಾರುಖ್ ಖಾನ್ ನೇತೃತ್ವದ ಸಿಕೆಆರ್ ತಂಡ ಸಿಪಿಎಲ್ ಚಾಂಪಿಯನ್ ಆಗಿದೆ ಹೊರಹೊಮ್ಮಿತ್ತು. ಫೈನಲ್ ಪಂದ್ಯದಲ್ಲಿ ಎರಡು ವಿಕೆಟ್ ಪಡೆದು ಚಾಂಪಿಯನ್ ಆಗಲು ನೆರವಾಗಿದ್ದ ಅಲಿ ಖಾನ್ಗೆ ಕೆಕೆಆರ್ ಬುಲಾವ್ ನೀಡಿತ್ತು. ಆದರೀಗ ಗಾಯದ ಕಾರಣ ಟೂರ್ನಿಯಿಂದ ಹೊರ ಬಿದ್ದು ನಿರಾಶೆ ಅನುಭವಿಸಿದ್ದಾರೆ.