ಚೆನ್ನೈ: ಐಪಿಎಲ್ ಉದ್ಘಾಟನಾ ಪಂದ್ಯದಿಂದ ಬಂದ ಸುಮಾರು 2 ಕೋಟಿ ರೂಪಾಯಿಯನ್ನು ಸಿಎಸ್ಕೆ ತಂಡದ ಆಡಳಿತ ಮಂಡಳಿ ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಸೈನಿಕರ ಕುಟಂಬಕ್ಕೆ ನೀಡಿದೆ.
ಹಲವು ವರ್ಷಗಳಿಂದ ಹಬ್ಬದಂತೆ ವಿಜೃಂಭಣೆಯಿಂದ ನಡೆಯುತ್ತಿದ್ದ ಐಪಿಎಲ್ ಉದ್ಘಾಟನೆಯನ್ನು ಈ ಬಾರಿ ಬಿಸಿಸಿಐ ರದ್ದುಗೊಳಿಸಿ 20 ಕೋಟಿ ಹಣವನ್ನು ಸೈನಿಕರ ಕಲ್ಯಾಣ ನಿಧಿಗೆ ನೀಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಸಿಎಸ್ಕೆ ಕೂಡ ತನ್ನ ಮೊದಲ ಪಂದ್ಯದ ಟಿಕೆಟ್ ಹಣವನ್ನು ಪುಲ್ವಾಮಾ ದಾಳಿಯಲ್ಲಿ ದೇಶಕ್ಕೋಸ್ಕರ ಪ್ರಾಣತ್ಯಾಗ ಮಾಡಿದ ವೀರ ಯೋದರ ಕುಟುಂಬಗಳಿಗೆ ನೀಡುವುದಾಗಿ ಘೋಷಿಸಿತ್ತು.
ಪಂದ್ಯ ಆರಂಭಕ್ಕೂ 10 ನಿಮಿಷ ಮುನ್ನ ಬಿಸಿಸಿಐ ₹ 20 ಕೋಟಿ ಹಾಗೂ ಸಿಎಸ್ಕೆ ₹ 2 ಕೋಟಿ ರೂಪಾಯಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಚೆಕ್ ಮೂಲಕ ಹಸ್ತಾಂತರಿಸಿದೆ.
ನಮ್ಮ ಸೈನಿಕರಿಗೆ ಗೌರವ ಸೂಚಿಸುವ ಸಲುವಾಗಿ ಸಂಭ್ರಮದ ಉದ್ಘಾಟನೆಯನ್ನು ರದ್ದುಗೊಳಿಸಿದ್ದೇವೆ. ಮುಂದಿನ ದಿನವೂ ನಮ್ಮ ಕೈಲಾದ ಸಹಾಯ ಮುಂದುವರಿಸುತ್ತೇವೆ ಎಂದು ಬಿಸಿಸಿಐ ಹಾಗೂ ಸಿಎಸ್ಕೆ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.