ಲಾಹೋರ್(ಪಾಕಿಸ್ತಾನ): ಕಳೆದ ಮೂರು ದಿನಗಳಿಂದ ಎದೆನೋವಿನಿಂದ ಬಳಲುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ - ಉಲ್ - ಹಕ್ ಹೃದಯಾಘಾತಕ್ಕೊಳಗಾಗಿದ್ದು, ಸೋಮವಾರ ಸಂಜೆ ಅವರನ್ನು ಯಶಸ್ವಿಯಾಗಿ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎದೆ ನೋವು ಕಾಣಿಸಿಕೊಂಡಿದ್ದಾಗಿ ಇಂಜಮಾಮ್ ಹೇಳಿದ ನಂತರ ಮೊದಲಿಗೆ ಆಸ್ಪತ್ರೆಯಲ್ಲಿ ಕೆಲವೊಂದು ಪರೀಕ್ಷೆಗಳನ್ನು ಮಾಡಿ ಬಿಡುಗಡೆ ಮಾಡಲಾಗಿತ್ತು. ಆದರೆ, ಸೋಮವಾರ ಮತ್ತಷ್ಟು ಪರೀಕ್ಷೆಗಳನ್ನು ಮಾಡಿದ್ದು, ಈ ಪರೀಕ್ಷೆಯ ಫಲಿತಾಂಶಗಳನ್ನು ನೋಡಿದಾಗ ಅವರು ಹೃದಯಾಘಾತಕ್ಕೆ ಒಳಗಾಗಿರುವುದು ದೃಢಪಟ್ಟಿದೆ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ.
ನಂತರ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ವೈದ್ಯರ ನಿಗಾದಲ್ಲಿ ಇಂಜಮಾಮ್ ಇದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
51 ವರ್ಷದ ಇಂಜಮಾಮ್ ಸುಮಾರು 375 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. 11,701 ರನ್ ಗಳಿಸಿರುವ ಅವರು ಪಾಕಿಸ್ತಾನದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. 119 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 8,829 ರನ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ ಪಾಕ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಮೂರನೇಯವರಾಗಿದ್ದಾರೆ.
2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಅವರು ಬ್ಯಾಟಿಂಗ್ ಸಲಹೆಗಾರರಾಗಿ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ನ ಮುಖ್ಯ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಕಲ್ಕತ್ತಾ ಹೈಕೋರ್ಟ್ನಿಂದ ಸೌರವ್ ಗಂಗೂಲಿ ಮತ್ತು ಬಂಗಾಳ ಸರ್ಕಾರಕ್ಕೆ ದಂಡ