ಅಲ್ ಅಮೆರತ್ (ಓಮನ್): ವಿಶ್ವಕಪ್ ಟಿ-20 ಟೂರ್ನಿಯ ಗ್ರೂಪ್ ಬಿ ತಂಡಗಳ ನಡುವಿನ ಪಂದ್ಯದಲ್ಲಿ ಬಾಂಗ್ಲಾದೇಶ ಗೆಲುವು ಸಾಧಿಸಿ ಮುಂದಿನ ಹಂತ ತಲುಪುವ ಆಸೆ ಜೀವಂತವಾಗಿರಿಸಿದೆ.
ಅಲ್ ಅಮೆರತ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾ ಪಡೆ ಆರಂಭದಲ್ಲೇ ಲಿಟನ್ ದಾಸ್ 7 (6) ವಿಕೆಟ್ ಕಳೆದುಕೊಂಡಿತು. ಆದರೆ ದಾಸ್ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ನಯೀಮ್ 3 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಅರ್ಧಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು. ಅವರು 50 ಎಸೆತಗಳನ್ನು ಎದುರಿಸಿ 64 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು.
ಇವರ ನಂತರ ಕ್ರೀಸಿಗೆ ಬಂದ ಶಕಿಬ್ ಅಲ್ ಹಸನ್ 26 ಎಸೆತದಲ್ಲಿ 6 ಬೌಂಡರಿ ಮೂಲಕ 42 ರನ್ ಗಳಿಸಿದ್ದು ಬಿಟ್ಟರೆ ಮತ್ತ್ಯಾವ ಆಟಗಾರನೂ ಸಹ ಹೆಚ್ಚು ರನ್ ಗಳಿಸಲಾಗದೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಬಾಂಗ್ಲಾ 20 ಓವರ್ ಮುಕ್ತಾಯಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 153 ರನ್ ಗುರಿ ನೀಡಿತು.
ಓಮನ್ ಪರವಾಗಿ ಬಿಲಾಲ್ ಖಾನ್, ಫಯಾಜ್ ಭಟ್ ತಲಾ 3 ವಿಕೆಟ್, ಖಲಿಮುಲ್ಲಾ 2 ಹಾಗೂ ಝೀಷನ್ ಮಖ್ಸೂದ್ 1 ವಿಕೆಟ್ ಪಡೆದರು.
ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಓಮನ್ ತಂಡಕ್ಕೆ ಉತ್ತಮ ಆರಂಭವೇನೋ ದೊರಕಿತು. ಆರಂಭಿಕ ಆಟಗಾರ ಅಕಿಬ್ ಇಲಿಯಾಸ್ 6 ರನ್ಗಳಿಸಿ ಔಟಾದ ಬಳಿಕ ಭಾರತೀಯ ಮೂಲದವರಾದ ಜಿತೇಂದರ್ ಸಿಂಗ್ ಜೊತೆಗೂಡಿದ ಕಶ್ಯಪ್ ಪ್ರಜಾಪತಿ ತಂಡಕ್ಕೆ ನೆರವಾದರು. ಜಿತೆೇಂದರ್ ಸಿಂಗ್ 33 ಎಸೆತದಲ್ಲಿ 40 ರನ್ಗಳಿಸಿದರೆ ಇತ್ತ ಕಶ್ಯಪ್ 18 ಎಸೆತಗಳಲ್ಲಿ 21 ರನ್ಗಳಿಸಿ ಬಾಂಗ್ಲಾ ಬೌಲರ್ಗಳ ಬೆವರಿಸಿಳಿಸಿದರು.
ಆದರೆ ಇವರಿಬ್ಬರೂ ವಿಕೆಟ್ ಒಪ್ಪಿಸುತ್ತಿದ್ದಂತೆ ಓಮನ್ ಆಟಗಾರರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಓಮನ್ 20 ಓವರ್ಗೆ 9 ವಿಕೆಟ್ ಕಳೆದುಕೊಂಡು 127 ರನ್ಗಳಿಸಿ 26 ರನ್ಗಳಿಂದ ಸೋಲೊಪ್ಪಿಕೊಂಡಿತು.
ಬಾಂಗ್ಲಾ ಪರ ಮುಸ್ತಫಿಜುರ್ ರೆಹಮನ್ 4 ವಿಕೆಟ್, ಶಕಿಬ್ ಅಲ್ ಹಸನ್ 3, ಮೆಹದಿ ಹಸನ್ ಹಾಗೂ ಸೈಫುದ್ದೀನ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬಾಂಗ್ಲಾ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋಲು ಕಂಡಿತ್ತು. ಇದೀಗ ಓಮನ್ ವಿರುದ್ಧ ಜಯದಾಖಲಿಸಿ ಗೆಲುವಿನ ಹಾದಿಗೆ ಮರಳಿದೆ.
ಮುಂದಿನ ಪಂದ್ಯದಲ್ಲಿ ಓಮನ್ ತಂಡ ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿದರೆ, ಬಾಂಗ್ಲಾದೇಶ ಪುಪುವಾ ನ್ಯೂ ಗಿನಿಯಾ ತಂಡದ ವಿರುದ್ಧ ಪಂದ್ಯವಾಡಲಿದೆ. ಈ ವೇಳೆ ಗ್ರೂಪ್ ಬಿ ಯಲ್ಲಿ ಹೆಚ್ಚು ಅಂಕಗಳಿಸಿದ ಮೊದಲೆರಡು ತಂಡಗಳು ಮುಂದಿನ ಹಂತ ತಲುಪಲಿವೆ. ಸದ್ಯ ಸ್ಕಾಟ್ಲೆಂಡ್ ಆಡಿದ ಎರಡೂ ಪಂದ್ಯ ಗೆದ್ದು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಓಮನ್ ಇದ್ದರೆ ಬಾಂಗ್ಲಾದೇಶ 3ನೇ ಸ್ಥಾನದಲ್ಲಿದೆ.