ಇಸ್ಲಾಮಾಬಾದ್: ಭದ್ರತೆ ಕಾರಣ ನೀಡಿ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ಪಾಕಿಸ್ತಾನದ ಪ್ರವಾಸ ರದ್ದುಗೊಳಿಸಿಕೊಂಡಿರುವ ಬೆನ್ನಲ್ಲೇ ಇಂಗ್ಲೆಂಡ್ ಕೂಡ ಅದೇ ದಾರಿ ತುಳಿದಿದ್ದು ಪಾಕಿಸ್ತಾನಕ್ಕೆ ಆರ್ಥಿಕ ಹೊಡೆತ ಬಿದ್ದಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಾಕಿಸ್ತಾನದ ಮಾಹಿತಿ ತಂತ್ರಜ್ಞಾನ ಸಚಿವ ಫವಾದ್ ಚೌಧರಿ, ಉಭಯ ದೇಶಗಳು ಪಾಕ್ ಪ್ರವಾಸ ರದ್ದು ಮಾಡಿಕೊಂಡಿರುವ ಕಾರಣ ಇಲ್ಲಿನ ದೂರದರ್ಶನಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಹಾಗಾಗಿ, ಕಾನೂನು ಸಲಹೆ ಪಡೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿರುವ ಅಸಾದುದ್ದೀನ್ ಓವೈಸಿ ನಿವಾಸಕ್ಕೆ ಹಾನಿ, ಐವರ ಬಂಧನ
ಸುದ್ದಿಗಾರರೊಂದಿಗೆ ಮಾತನಾಡಿರುವ ಚೌಧರಿ, ನ್ಯೂಜಿಲ್ಯಾಂಡ್-ಇಂಗ್ಲೆಂಡ್ ತಂಡಗಳು ಪ್ರವಾಸ ರದ್ಧುಗೊಳಿಸಿರುವ ಕಾರಣ ನಮಗೆ ನಷ್ಟವಾಗಿದೆ. ಎರಡೂ ಕ್ರಿಕೆಟ್ ಮಂಡಳಿ ವಿರುದ್ಧ ಕಾನೂನು ಸಲಹೆ ಪಡೆದುಕೊಂಡು, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಪಾಕ್ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಲಾಬಿ ನಡೆಯುತ್ತಿದೆ. ಅದು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.
2009ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಬಸ್ ಮೇಲೆ ಭಯೋತ್ಪಾದಕರ ದಾಳಿ ನಡೆದ ನಂತರ ಅಂತಾರಾಷ್ಟ್ರೀಯ ತಂಡಗಳು ಇಲ್ಲಿಗೆ ಆಗಮಿಸಲು ಹಿಂದೇಟು ಹಾಕುತ್ತಿವೆ. ಆದರೆ ಕಳೆದ ಕೆಲ ವರ್ಷಗಳಿಂದ ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ಇಲ್ಲಿಗೆ ಪ್ರವಾಸ ಕೈಗೊಂಡು ಕ್ರಿಕೆಟ್ ಆಡಿವೆ. ಇದೀಗ ನ್ಯೂಜಿಲ್ಯಾಂಡ್ ಕೂಡ ಪ್ರವಾಸ ಕೈಗೊಂಡಿತ್ತು. ಆದರೆ ಅಲ್ಲಿಗೆ ತೆರಳಿದ ಮೇಲೆ ಬೆದರಿಕೆ ಬಂದ ಕಾರಣ ತವರಿಗೆ ವಾಪಸ್ ಆಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕೂಡ ಇದೇ ನಿರ್ಧಾರ ಕೈಗೊಂಡಿದೆ.