ಮುಂಬೈ : ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯ 372 ರನ್‌ಗಳ ಭಾರಿ ಅಂತರದಲ್ಲಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಎಲ್ಲಾ ಮಾದರಿಗಳಲ್ಲೂ 50 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದ ಮೊದಲ ಆಟಗಾರ ಎಂಬ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದೆ. ವಾಂಖೆಡೆಯಲ್ಲಿ ಇಂದು ನಡೆದ ಪಂದ್ಯವನ್ನು ಗೆದ್ದ ಬಳಿಕ ಕಿವೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಕೊಹ್ಲಿ ಬಾಯ್ಸ್ ತಮ್ಮದಾಗಿಸಿಕೊಂಡರು.
140 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು 4ನೇ ದಿನದಾಟ ಆರಂಭಿಸಿದ ಕಿವೀಸ್ 22 ರನ್ ಕಲೆ ಹಾಕುವಷ್ಟರಲ್ಲಿ ರಚಿನ್ ರವೀಂದ್ರ (18) ಹಾಗೂ ಹೆನ್ರಿ ನಿಕೋಲ್ಸ್ ಅವರ ವಿಕೆಟ್ ಉರುಳಿಸುವಯಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಯಶಸ್ವಿಯಾದರು.
ಸ್ಪಿನ್ನರ್ ಜಯಂತ್ ಯಾದವ್ ಒಂದೇ ಓವರ್‌ನಲ್ಲಿ ಕೈಲ್ ಜೇಮಿಸನ್ ಹಾಗೂ ಟಿಮ್ ಸೌಥಿ ಅವರನ್ನು ಔಟ್ ಮಾಡಿದರು. ಅಂತಿಮ ಎರಡು ವಿಕೆಟ್‌ಗಳು ವೇಗವಾಗಿ ಪತನಗೊಂಡವು. ಪರಿಣಾಮ ನ್ಯೂಜಿಲೆಂಡ್ 167 ರನ್‌ಗಳಿಗೆ ಆಲೌಟ್ ಆಯಿತು. ಆತಿಥೇಯರು 372 ರನ್‌ಗಳ ಭಾರಿ ಅಂತರದಿಂದ ಜಯಗಳಿಸಿ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡರು.
ದಕ್ಷಿಣ ಆಫ್ರಿಕಾ ವಿರುದ್ಧದ ತಲಾ 3 ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಗಾಗಿ ಟೀಂ ಇಂಡಿಯಾ ಹರಣಿಗಳ ನಾಡಿಗೆ ಪ್ರವಾಸ ಕೈಗೊಳ್ಳಲಿದೆ. ಡಿಸೆಂಬರ್ 26 ರಿಂದ ಸರಣಿ ಆರಂಭವಾಗಲಿದೆ.
ಇದನ್ನೂ ಓದಿ: Mumbai Test: ಕಿವೀಸ್ ವಿರುದ್ಧ ಟೆಸ್ಟ್ ಗೆದ್ದ ಭಾರತ; 372 ರನ್‌ಗಳಿಂದ ಜಯಭೇರಿ