ನವದೆಹಲಿ: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿಕೊಳ್ಳಲು ಇದು ಉತ್ತಮ ಅವಕಾಶ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಸರಣಿಯನ್ನಾಡಲು ತೆರಳಿದ್ದು ಒಂದು ವೇಳೆ ಅಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಪ್ರದರ್ಶನ ನೀಡಿದರೆ ಇದೀಗ ಕೇಳಿಬರುತ್ತಿರುವ ನಾಯಕತ್ವ ಬದಲಾವಣೆಯ ಕೂಗನ್ನು ಅಷ್ಟು ಸುಲಭವಾಗಿ ತಳ್ಳಿ ಹಾಕುವಂತಿಲ್ಲ ಎಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಸೀಮಿತ ಓವರ್‌ಗಳ ಸರಣಿ ಹೊರತುಪಡಿಸಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್, ಈ ಸಲದ ಐಪಿಎಲ್ನಲ್ಲಿ ಮತ್ತೆ ಚಾಂಪಿಯನ್ ಆಗಿದ್ದಾರೆ. ಕಳಪೆ ಮಟ್ಟದ ಪ್ರದರ್ಶನ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನೇತೃತ್ವ ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವಂತೆ ಸಾಕಷ್ಟು ಜನ ಸಲಹೆ ನೀಡಿದ್ದರು.
ಇದರ ಮುಂದುವರೆದ ಭಾಗವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಾಯಕತ್ವದ ಬದಲಾವಣೆ ಬಗ್ಗೆಯೂ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ತಮ್ಮ ಹೇಳಿಕೆಯನ್ನು ತಿಳಿಸಿದ್ದಾರೆ.
ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಆಗಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಏಷ್ಯಾ ಕಪ್ಅನ್ನು ಗೆದ್ದಿದೆ. ಅಜಿಂಕ್ಯ ರಹಾನೆ ಉಪನಾಯಕನಾಗಿದ್ದರೂ ಅಡಿಲೇಡ್ನಲ್ಲಿ ನಡೆಯುವ ಟೆಸ್ಟ್ನಲ್ಲಿ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ಭಾರತಕ್ಕೆ ಮರಳಲಿದ್ದಾರೆ.
ಹಾಗಾಗಿ ಇದು ರೋಹಿತ್ಗೆ ಒಂದು ರೀತಿ ವರದಾನ. ಅವನ ಸಾಮರ್ಥ್ಯ ಸಾಬೀತು ಮಾಡಲು ಇದೊಂದು ಉತ್ತಮ ಅವಕಾಶ. ತಂಡವನ್ನು ಮುನ್ನಡೆಸುವ ಪ್ರತಿಭೆ ಮತ್ತು ಸಾಮರ್ಥ್ಯ ಅವರಲ್ಲಿದೆ. ಇಡೀ ಜಗತ್ತು ರೋಹಿತ್ನನ್ನು ತಂಡದ ನಾಯಕನನ್ನಾಗಿ ನೋಡಲು ಬಯಸುತ್ತಿದೆ. ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅವರೂ ಒಬ್ಬರಾಗಿದ್ದರಿಂದ ಟೀಂ ಇಂಡಿಯಾದ ನಾಯಕತ್ವ ಅವರ ಹೆಗಲೇರುವುದನ್ನು ಯಾರಿದಂಲೂ ತಪ್ಪಿಸಿಲಾಗದು ಎಂದಿದ್ದಾರೆ.