ನವದೆಹಲಿ: 2022ರ ಇಂಡಿಯನ್ ಪ್ರಿಮೀಯರ್ ಲೀಗ್ ಮುಕ್ತಾಯಗೊಂಡಿದ್ದು, ಇದರ ಬೆನ್ನಲ್ಲೇ ಟೀಂ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿ ಆಡಲು ಅಣಿಯಾಗಲಿದೆ. ಹೀಗಾಗಿ, ಜೂನ್ 5ರಂದು ದೆಹಲಿಗೆ ಎಲ್ಲ ಪ್ಲೇಯರ್ಸ್ ಆಗಮಿಸಲಿದ್ದಾರೆ. ಇದಕ್ಕೂ ಮುಂಚಿತವಾಗಿ ಜೂನ್ 2ರಂದು ಹರಿಣಗಳ ತಂಡ ಭಾರತಕ್ಕೆ ಬರಲಿದೆ.
ಜೂನ್ 9ರಿಂದ ಉಭಯ ತಂಡಗಳ ನಡುವೆ ಟಿ-20 ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಉಭಯ ತಂಡಗಳ ಘೋಷಣೆಯಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಪ್ಲೇಯರ್ಸ್ ಪರೀಕ್ಷೆಗೊಳಪಡಲಿದ್ದಾರೆ. ವಿಶೇಷ ಎಂದರೆ ಆಟಗಾರರು ಯಾವುದೇ ರೀತಿಯ ಬಯೋ ಬಬಲ್ಗೆ ಒಳಪಡುವುದಿಲ್ಲ. ಕ್ರಿಕೆಟ್ ವೀಕ್ಷಣೆ ಮಾಡಲು ಶೇ. 100ರಷ್ಟು ಪ್ರೇಕ್ಷಕರಿಗೆ ಅವಕಾಶ ಸಹ ನೀಡಲಾಗಿದೆ.
ಜೂನ್ 9ರಂದು ದೆಹಲಿಯಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಜೂನ್ 12 ಕಟಕ್, ಜೂನ್ 14 ವಿಶಾಖಪಟ್ಟಣಂ, ಜೂನ್ 17 ರಾಜ್ಕೋಟ್ ಹಾಗೂ ಜೂನ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯ ನಡೆಯಲಿದೆ. ಎರಡು ತಿಂಗಳ ಕಾಲ ಸುದೀರ್ಘ ಐಪಿಎಲ್ನಲ್ಲಿ ಭಾಗಿಯಾಗಿರುವ ಕಾರಣ ಟೀಂ ಇಂಡಿಯಾ ಖಾಯಂ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಅನೇಕ ಹಿರಿಯರು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹೀಗಾಗಿ, ತಂಡವನ್ನ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ , ಆರ್ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್