ಹೈದರಾಬಾದ್: ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ 2023 ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಕ್ರೀಡಾಪಟು ಆಗಿದ್ದಾರೆ. 'ಗೂಗಲ್ ಇಂಡಿಯಾ' ಸೋಮವಾರ ಈ ವರ್ಷ ಗೂಗಲ್‌ನಲ್ಲಿ ದೇಶದ ಟ್ರೆಂಡಿಂಗ್ ಪಟ್ಟಿಯನ್ನು ಬಹಿರಂಗಪಡಿಸಿದೆ. ಗಿಲ್ ನಂತರ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ, ಮೊಹಮ್ಮದ್ ಶಮಿ, ಗ್ಲೆನ್ ಮ್ಯಾಕ್ಸ್‌ವೆಲ್, ಸೂರ್ಯಕುಮಾರ್ ಯಾದವ್ ಮತ್ತು ಟ್ರಾವಿಸ್ ಹೆಡ್ ಇದ್ದಾರೆ.
2023 ವರ್ಷ ಗಿಲ್‌ಗೆ ತುಂಬಾ ಅದೃಷ್ಟದ ವರ್ಷ ಎಂದ್ರೆ ತಪ್ಪಾಗಲಾರದು. ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಇದರೊಂದಿಗೆ ಸಚಿನ್, ಸೆಹ್ವಾಗ್, ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಬಳಿಕ ಗಿಲ್ ಏಕದಿನದಲ್ಲಿ ದ್ವಿಶತಕ ಸಿಡಿಸಿದ ಐದನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇತ್ತೀಚೆಗಷ್ಟೇ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಗಿಲ್ ಮೊದಲ ಸ್ಥಾನ ಪಡೆದಿದ್ದರು. ಗಿಲ್ ಪ್ರಸ್ತುತ 826 ರೇಟಿಂಗ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ 2023ರ ಏಷ್ಯಾಕಪ್ ಮತ್ತು 2023ರ ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗಿದ್ದ ಗಿಲ್ ಈ ಪ್ರತಿಷ್ಠಿತ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿಸಿದ್ದರು.
ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಶುಭಮನ್ ಗಿಲ್ ಆಯ್ಕೆಯಾಗಿದ್ದಾರೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೇಡ್ ಮಾಡಲಾಗಿದ್ದು, ಗುಜರಾತ್ ತಂಡದ ಮ್ಯಾನೇಜ್ಮೆಂಟ್ ಗಿಲ್‌ಗೆ ನಾಯಕತ್ವ ಪಟ್ಟ ನೀಡಿದೆ. ಇದರೊಂದಿಗೆ ಬ್ಯಾಟರ್‌ನಿಂದ ಗಿಲ್‌ಗೆ ನಾಯಕನಾಗಿ ಬಡ್ತಿ ನೀಡಲಾಗಿದೆ.
ಶುಭ್ಮನ್ ಗಿಲ್ 24ನೇ ವಯಸ್ಸಿನಲ್ಲಿ ಐಪಿಎಲ್ ತಂಡದ ಸಾರಥ್ಯ ಪಡೆಯಲಿದ್ದಾರೆ. ಈ ಅನುಕ್ರಮದಲ್ಲಿ, ಅವರು ಐಪಿಎಲ್‌ನಲ್ಲಿ ಕಿರಿಯ ವಯಸ್ಸಿನಲ್ಲಿ ನಾಯಕತ್ವ ವಹಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರ 10ರೊಳಗೆ ಸೇರಿಕೊಂಡಿದ್ದಾರೆ.
ಗಿಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಕೇವಲ 33 ಇನ್ನಿಂಗ್ಸ್‌ಗಳಲ್ಲಿ 47.34 ಸರಾಸರಿಯಲ್ಲಿ 1373 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಮತ್ತು ಎಂಟು ಅರ್ಧ ಶತಕಗಳಿವೆ. ಕಳೆದ ಸೀಸನ್ನಲ್ಲಿ ಮಾತ್ರ ಗಿಲ್ 17 ಪಂದ್ಯಗಳಲ್ಲಿ 890 ರನ್ ಗಳಿಸಿದರು. ಅವರು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದರು. ಇದರಲ್ಲಿ 3 ಶತಕಗಳಿವೆ. ಪ್ಲೇಆಫ್‌ನಲ್ಲಿ ಗಿಲ್ ಮುಂಬೈ ಇಂಡಿಯನ್ಸ್ ವಿರುದ್ಧ 60 ಎಸೆತಗಳಲ್ಲಿ 129 ರನ್ ಗಳಿಸಿ ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಓದಿ; 700ನೇ ರೈಡ್ ಪಾಯಿಂಟ್ ಕಲೆಹಾಕಿದ ಅರ್ಜುನ್ ದೇಶ್ವಾಲ್; ಜೈಪುರ ಪಿಂಕ್ ಪ್ಯಾಂಥರ್ಸ್ಗೆ ಮೊದಲ ಗೆಲುವು