ಮುಂಬೈ: ವಿರಾಟ್ ಕೊಹ್ಲಿ ನೇತೃತ್ವದ ಟಾಪ್ ಆಟಗಾರರನ್ನೊಳಗೊಂಡ ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವಾಗಲೇ ಮತ್ತೊಂದು ವೈಟ್ಬಾಲ್ ಸ್ಪೆಷಲಿಸ್ಟ್ಗಳ ತಂಡ ದ್ವಿಪಕ್ಷೀಯ ಸರಣಿಯನ್ನಾಡಲು ಜುಲೈನಲ್ಲಿ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಈಗಾಗಲೇ ನಿಗದಿಯಾಗಿರುವಂತೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಭಾರತ ತಂಡ ಜೂನ್ ಮೊದಲ ವಾರದಲ್ಲಿ ಇಂಗ್ಲೆಂಡ್ಗೆ ಪ್ರಯಾಣ ಬೆಳಸಲಿದೆ. ಅಲ್ಲಿ ಜೂನ್, ಜುಲೈ , ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳವರೆಗೂ ಇರಲಿದೆ. ಈ ವೇಳೆ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ.
ಜುಲೈನಲ್ಲಿ ಖಾಲಿಯಿದ್ದರೂ ಮತ್ತೆ ವಾಪಸ್ ಬಂದು ಇಲ್ಲಿ ಕ್ವಾರಂಟೈನ್ ಮಾಡಿ ಮತ್ತೆ ಇಂಗ್ಲೆಂಡ್ಗೆ ತೆರಳಿ ಅಲ್ಲಿ ಕ್ವಾರಂಟೈನ್ ಮಾಡುವುದಕ್ಕಿಂತ ಆ ತಿಂಗಳು ಅಲ್ಲೇ ಉಳಿದುಕೊಡು,ಇಂಗ್ಲೀಷ್ ಪರಿಸ್ಥಿತಿಗೆ ಹೊಂದಿಕೊಳ್ಳುವುದಕ್ಕೆ ಟೀಂ ಇಂಡಿಯಾ ನಿರ್ಧಿರಿಸಿದೆ. ಇತ್ತ ಅದೇ ಸಂದರ್ಭದಲ್ಲಿ ಭಾರತ 3 ಏಕದಿನ ಮತ್ತು 5 ಟಿ-20 ಪಂದ್ಯಗಳ ಸರಣಿಯನ್ನಾಡಲು ಲಂಕಾಗೆ ಪ್ರವಾಸ ಕೈಗೊಳ್ಳಲಿದೆ.
ಒಂದೇ ಅವಧಿಯಲ್ಲಿ ಟೀಂ ಇಂಡಿಯಾದ ಎರಡು ತಂಡಗಳಿಂದ ಕ್ರಿಕೆಟ್
ನಾವು ಸೀನಿಯರ್ ಪುರುಷರ ತಂಡಕ್ಕಾಗಿ ಜುಲೈ ತಿಂಗಳಲ್ಲಿ ಶ್ರೀಲಂಕಾದಲ್ಲಿ ಸರಣಿ ಆಯೋಜಿಸಿದ್ದೇವೆ. ಈ ತಂಡ ತುಂಬಾ ವಿಭಿನ್ನವಾಗಿರಲಿದೆ. ಅವರೆಲ್ಲರೂ ವೈಟ್ ಬಾಲ್ ಸ್ಪೆಷಲಿಸ್ಟ್ಗಳಾಗಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಗಂಗೂಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಜುಲೈನಲ್ಲಿ ಭಾರತ ಪುರುಷರಿಗೆ ಯಾವುದೇ ಅಧಿಕೃತ ಪಂದ್ಯಗಳಿರುವುದಿಲ್ಲ. ಈ ಸಂದರ್ಭದಲ್ಲಿ ಭಾರತ ತಂಡಗಳ ನಡುವೆ ಅಭ್ಯಾಸ ಪಂದ್ಯಗಳು ಮಾತ್ರ ನಡೆಯಲಿವೆ. ಆದ್ದರಿಂದ ಸೀಮಿತ ಓವರ್ಗಳ ಸರಣಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಅಮೂಲ್ಯ ಸಂದರ್ಭದಲ್ಲಿ ವೈಟ್ಬಾಲ್ ಪರಿಣಿತರಿಗೆ ಕೆಲವು ಪಂದ್ಯಗಳನ್ನಾಡಿಸುವುದು ಉಪಯುಕ್ತವಾಗಿರುತ್ತದೆ ಎಂದು ದಾದಾ ತಿಳಿಸಿದ್ದಾರೆ.
ಅನುಭವಿ ಪ್ಲೇಯರ್ಸ್ ಜತೆ ಹೊಸ ಮುಖಗಳಿಗೆ ಅವಕಾಶ
ಇದರಿಂದ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಅನುಭವಿ ಶಿಖರ್ ಧವನ್, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಹಾಗೂ ಸೀಮಿತ ಓವರ್ಗಳಲ್ಲಿ ಭರವಸೆ ಮೂಡಿಸಿರುವ ಸೂರ್ಯ ಕುಮಾರ್ ಯಾದವ್, ಪೃಥ್ವಿ ಶಾ, ಇಶಾನ್ ಕಿಶನ್, ಸಂಜು ಸಾಮ್ಸನ್ ಹಾಗೂ ಐಪಿಎಲ್ನಲ್ಲಿ ಮಿಂಚಿರುವ ಹೊಸ ಮುಖಗಳಾದ ದೇವದತ್ ಪಡಿಕ್ಕಲ್, ಚೇತನ್ ಸಕಾರಿಯಾ ಸೇರಿದಂತೆ ಬಲಿಷ್ಠವಾದ ಒಂದು ತಂಡ ಕಟ್ಟಲು ಸಮರ್ಥರಾಗಿದ್ದಾರೆ.
ಇದನ್ನು ಓದಿ:ಜುಲೈನಲ್ಲಿ ಭಾರತ ತಂಡದಿಂದ ಲಂಕಾ ಪ್ರವಾಸ, ಸದ್ಯಕ್ಕೆ ಐಪಿಎಲ್ ಅಸಾಧ್ಯ ಎಂದ ದಾದಾ