ಕೋಲ್ಕತ್ತ (ಪಶ್ಚಿಮ ಬಂಗಾಳ) : ಈಗಾಗಲೇ ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಮಿನಿ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಈ ಹರಾಜು ಪ್ರಕ್ರಿಯೆಯಲ್ಲಿರುವ ಘಟಾನುಘಟಿ ಆಟಗಾರರ ಮಧ್ಯೆ ಬಹಳ ಅಪರೂಪದ ವಿಭಿನ್ನ ಕೌಶಲ್ಯ ಹೊಂದಿರುವ ಪಶ್ಚಿಮ ಬಂಗಾಳ ಮೂಲದ ಯುವ ಆಟಗಾರನ ಹೆಸರು ಸದ್ದು ಮಾಡುತ್ತಿದೆ.
22 ವರ್ಷದ ಆಟಗಾರ ಕೌಶಿಕ್ ಮೈಟಿ ತನ್ನ ಎರಡು ಕೈಗಳಿಂದ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ಎಡಗೈಯಲ್ಲಿ ಆರ್ಥೊಡಾಕ್ಸ್ ಸ್ಪಿನ್ ಮತ್ತು ಬಲಗೈ ಆಫ್ ಬ್ರೇಕ್ ಬೌಲಿಂಗ್ ಮಾಡಬಲ್ಲರು. ಕ್ಲಬ್ ಕ್ರಿಕೆಟ್‌ನಲ್ಲಿ ಹಾಗೂ ಬಂಗಾಳ ತಂಡದಲ್ಲಿ ಆಡುವ ಕೌಶಿಕ್ ತನ್ನ ಎರಡು ಕೈಗಳಿಂದ ಬೌಲಿಂಗ್ ಮಾಡುವ ಮೂಲಕ ವಿಕೆಟ್ ಪಡೆದು ಮಿಂಚಿದ್ದಾರೆ.
ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಾಳದ ಜೆರ್ಸಿ ತೊಟ್ಟು ತಮ್ಮ ಚೊಚ್ಚಲ ಪಂದ್ಯವಾಡಿದ್ದಾರೆ. ಈ ಟೂರ್ನಿಯಲ್ಲಿ ಕೌಶಿಕ್ ಪಂಜಾಬ್ ವಿರುದ್ಧ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಅಲ್ಲದೇ, ಮುಷ್ತಾಕ್ ಅಲಿ ಟ್ರೋಫಿಯಲ್ಲೂ (ದೇಶೀಯ ಟಿ20 ಪಂದ್ಯಾವಳಿ) ಕೌಶಿಕ್ ಬಂಗಾಳವನ್ನು ಪ್ರತಿನಿಧಿಸಿದ್ದಾರೆ. ಈ ಎಲ್ಲ ಪಂದ್ಯಗಳಲ್ಲಿ ಉತ್ತಮವಾಗಿ ಬೌಲಿಂಗ್ ಪ್ರದರ್ಶನ ತೋರಿರುವ ಕೌಶಿಕ್ ಅವರು ಸಹಜವಾಗಿಯೇ ಐಪಿಎಲ್ ತಂಡಗಳ ಗಮನ ಸೆಳೆದಿದ್ದಾರೆ.
ಕೌಶಿಕ್ ರಾಜಸ್ಥಾನ್ ರಾಯಲ್ಸ್ ಆಯೋಜಿಸಿದ್ದ ಶಿಬಿರದಲ್ಲಿ ಪಾಲ್ಗೊಂಡರು ಅಭ್ಯಾಸ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು. ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಕ್ಯಾಂಪ್‌ನಲ್ಲೂ ಕೂಡ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಆಸ್ಟ್ರೇಲಿಯಾ ಬ್ಯಾಟರ್ ರಿಕಿ ಪಾಂಟಿಂಗ್ ಅವರಿಂದ ಕೌಶಿಕ್ ಪ್ರಶಂಸೆ ಪಡೆದಿದ್ದಾರೆ. ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್‌ನ ಶಿಬಿರಕ್ಕೂ ಆಹ್ವಾನಿಸಲಾಗಿತ್ತು. ಆದರೇ, ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೌಶಿಕ್ ಬೆಂಗಾಲ್ ಪರ ಆಡುವುದರಲ್ಲಿ ನಿರತರಾಗಿದ್ದರಿಂದ ಭಾಗವಹಿಸಲು ಸಾಧ್ಯವಾಗಲಿಲ್ಲ.
ಸಾಕಷ್ಟು ಅಡೆತಡೆಗಳನ್ನು ಜಯಿಸಿರುವ ಕೌಶಿಕ್ ಅವರು ಸಾಧಾರಣ ಕುಟುಂಬದಿಂದ ಬಂದವರಾಗಿದ್ದಾರೆ. ಕೌಶಿಕ್ ಅವರ ತಂದೆ ಪಾನ್ ಮಸಾಲಾ ಅಂಗಡಿ ನಡೆಸುತ್ತಿದ್ದು, ಓರ್ವ ಹಿರಿಯ ಸಹೋದರರನ್ನು ಹೊಂದಿದ್ದಾರೆ. ಅಂಗಡಿ ನಡೆಸುತ್ತಲೇ ಮಗನ ಕ್ರಿಕೆಟ್ ಪಯಣವನ್ನು ಪೋಷಕರು ಬೆಳೆಸುತ್ತಿದ್ದಾರೆ. ಏನಾದರೂ ಈ ಬಾರಿ ಐಪಿಎಲ್ ಹರಾಜಿನಲ್ಲಿ 10 ತಂಡಗಳ ಪೈಕಿ ಯಾವುದರೂ ಒಂದು ತಂಡಕ್ಕೆ ಕೌಶಿಕ್ ಬಿಕರಿಯಾದರೇ ಕ್ರಿಕೆಟ್ ಮೈದಾನದಲ್ಲಿ ಹೆಸರು ಮಾಡುವ ಮೂಲಕ ತನ್ನ ತಂದೆ - ತಾಯಿಯ ಸಂತೋಷಕ್ಕೆ ಕಾರಣವಾಗಲಿದ್ದಾರೆ.
’’ಆರಂಭದ ದಿನಗಳಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಆಟವನ್ನು ನೋಡಿ ಕ್ರಿಕೆಟ್ ಮೇಲಿನ ಪ್ರೀತಿ ಬೆಳೆಸಿಕೊಂಡಿದ್ದೆ. ಆ ನಂತರ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತು ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಕೌಶಲ್ಯದಿಂದ ಹೆಚ್ಚು ಸ್ಫೂರ್ತಿ ಪಡೆದುಕೊಂಡಿದ್ದೇನೆ. ಸೌರವ್ ಮತ್ತು ರಿಕಿ ಸರ್ ಇಬ್ಬರೂ ನನಗೆ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ. ಭವಿಷ್ಯದಲ್ಲಿ ಉತ್ತಮ ಕ್ರಿಕೆಟಿಗನಾಗಲು ನಾನು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ‘‘ ಎಂದು ಮೈಟಿ ಹೇಳಿದ್ದಾರೆ.
ಇದನ್ನೂ ಓದಿ : ಐಪಿಎಲ್ ಹರಾಜು: ದಾಖಲೆಯ ಮೊತ್ತಕ್ಕೆ ಹೈದರಾಬಾದ್ ತಂಡಕ್ಕೆ ಬಿಕರಿಯಾದ ಪ್ಯಾಟ್ ಕಮಿನ್ಸ್