ಹ್ಯಾಂಗ್ಝೌ (ಚೀನಾ): ಮೊದಲ ಬಾರಿಗೆ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡ ಆಡುತ್ತಿದೆ. ಈಗಾಗಲೇ ಭಾರತೀಯ ವನಿತೆಯರ ತಂಡ ಬಾಂಗ್ಲಾದೇಶವನ್ನು ಮಣಿಸಿ ಫೈನಲ್ಗೆ ಪ್ರವೇಶಿಸಿದೆ. ಎರಡನೇ ಸೆಮಿ ಫೈನಲ್ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡ ಮುಖಾಮುಖಿ ಆಗಿದ್ದವು. ಇದರಲ್ಲಿ ಪಾಕಿಸ್ತಾವನ್ನು ಮಣಿಸಿದ ಸಿಂಹಳದ ವನಿತಿಯರು ಅಂತಿಮ ಹಣಾಹಣಿಗೆ ಸಿದ್ಧರಾಗಿದ್ದಾರೆ. ನಾಳೆ ಚಿನ್ನಕ್ಕಾಗಿ ಭಾರತ ಮತ್ತು ಲಂಕಾ ನಡುವೆ ಪೈಪೋಟಿ ನಡೆಯಲಿದೆ.
ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 51 ರನ್ಗೆ ಕಟ್ಟಿಹಾಕಿದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಬಾಂಗ್ಲಾದೇಶಕ್ಕೆ ಭಾರತೀಯ ವನಿತೆಯರ ಪ್ರಬಲ ಬೌಲಿಂಗ್ ದಾಳಿ ಕಾಡಿತು. ಪೂಜಾ ವಸ್ತ್ರಾಕರ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಉಳಿದಂತೆ ಎಲ್ಲರೂ ಒಂದೊಂದು ವಿಕೆಟ್ ಹಂಚಿಕೊಂಡರು. ಬಾಂಗ್ಲಾ ನಾಯಕಿ ನಿಗರ್ ಸುಲ್ತಾನಾ 12 ರನ್ ಗಳಿಸಿದ್ದೇ ಅವರ ತಂಡದ ಬೃಹತ್ ಮೊತ್ತ. ನಹಿದಾ ಅಕ್ತರ್ 9, ಸೋಭಾನಾ ಮೊಸ್ತರಿ ಮತ್ತು ರಿತು ಮೋನಿ ತಲಾ 8 ರನ್ ಗಳಿಸಿದರು. ಐವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
52 ರನ್ ಸಂಕ್ಷಿಪ್ತ ಗುರಿಯನ್ನು ಬೆನ್ನು ಹತ್ತಿದ ಭಾರತದ ವನಿತೆಯರು 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದರು. ನಾಯಕಿ ಮಂದಾನ 7 ರನ್ ಔಟ್ ಆದರೆ, ಶೆಫಾಲಿ ವರ್ಮಾ 17 ರನ್ಗೆ ವಿಕೆಟ್ ಕೊಟ್ಟರು. ಜೆಮಿಕಾ ರೋಡ್ರಿಗಸ್ ಅಜೇಯ 20 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. 8.2 ಓವರ್ನಲ್ಲಿ 8 ವಿಕೆಟ್ ಉಳಿಸಿಕೊಂಡು ಭಾರತದ ತಂಡ 52 ರನ್ ಗಳಿಸಿತು.
ಎರಡನೇ ಸೆಮಿಫೈನಲ್ಸ್: ಎರಡನೇ ಸೆಮಿಸ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿ ಆಗಿದ್ದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ನಿಗದಿತ ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಲಂಕಾ 16.3 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿತು. ಈ ಮೂಲಕ 6 ವಿಕೆಟ್ಗಳ ಗೆಲುವು ದಾಖಲಿಸಿ ಫೈನಲ್ಗೆ ಪ್ರವೇಶಿಸಿದೆ.
ಫೈನಲ್ನಲ್ಲಿ ಭಾರತ -ಲಂಕಾ ಮುಖಾಮುಖಿ: ನಾಳೆ ಚಿನ್ನದ ಪದಕಕ್ಕಾಗಿ ಭಾರತ ಮತ್ತು ಲಂಕಾ ನಡುವೆ ಫೈನಲ್ ಹಣಾಹಣಿ ನಡೆಯಲಿದೆ. ಏಷ್ಯನ್ ರಾಷ್ಟ್ರಗಳಲ್ಲಿ ಭಾರತದ ವನಿತೆಯರ ತಂಡ ಬಲಿಷ್ಠವಾಗಿ ಗುರುತಿಸಿಕೊಂಡಿದೆ. ಟಿ20 ಮಾದರಿಯಲ್ಲಿ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಕಾ ರೋಡ್ರಿಗಸ್ ಮತ್ತು ಹರ್ಮನ್ಪ್ರೀತ್ ಕೌರ್ ಉತ್ತಮ ಪ್ರದರ್ಶನ ನೀಡಿದ ದಾಖಲೆಗಳಿವೆ. ಹೀಗಾಗಿ ಭಾರತಕ್ಕೆ ನಾಳೆ ಚಿನ್ನ ಒಲಿಯುವ ಅವಕಾಶ ಇದೆ.
ಸಂಭಾವ್ಯ ತಂಡ.. ಭಾರತ: ಸ್ಮೃತಿ ಮಂಧಾನ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಕನಿಕಾ ಅಹುಜಾ, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಅಮನ್ಜೋತ್ ಕೌರ್, ಪೂಜಾ ವಸ್ತ್ರಾಕರ್, ಮಿನ್ನು ಮಣಿ, ರಾಜೇಶ್ವರಿ ಗಾಯಕ್ವಾಡ್.
ಶ್ರೀಲಂಕಾ: ಚಮರಿ ಅಥಾಪತ್ತು (ನಾಯಕಿ), ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ಹಾಸಿನಿ ಪೆರೇರಾ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಇನೋಕಾ ರಣವೀರ, ಅಚಿನಿ ಕುಲಸೂರಿಯಾ, ಉದೇಶಿಕಾ ಪ್ರಬೋಧನಿ, ಇನೋ ಪ್ರಿಯದರ್ಶಿನಿ
ಇದನ್ನೂ ಓದಿ: Asian Games: ಏಷ್ಯನ್ ಗೇಮ್ಸ್ ಬಾಕ್ಸಿಂಗ್.. ನಿಖತ್ ಜರೀನ್ ಪ್ರಿ-ಕ್ವಾರ್ಟರ್, ಪ್ರೀತಿ ಪವಾರ್ ಕ್ವಾರ್ಟರ್ಫೈನಲ್ಗೆ ಲಗ್ಗೆ