ಅಹ್ಮದಾಬಾದ್(ಗುಜರಾತ್): 2023ರ ಏಕದಿನ ವಿಶ್ವಕಪ್ಗಾಗಿ ಭರ್ಜರಿ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ ಕೆಲವು ಹೊಸ ಪ್ರಯೋಗಗಳಿಗೆ ಕೈಹಾಕುತ್ತಿದೆ. ರೋಹಿತ್ ಶರ್ಮಾ ಪೂರ್ಣ ಪ್ರಮಾಣದಲ್ಲಿ ಏಕದಿನ ತಂಡದ ಸಾರಥ್ಯ ವಹಿಸಿಕೊಂಡಿದ್ದು ಈಗಾಗಲೇ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಇಂದು ಉಭಯ ತಂಡಗಳ ನಡುವೆ ಕೊನೆಯ ಏಕದಿನ ಪಂದ್ಯ ನಡೆಯಲಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ರೋಹಿತ್ ಬಳಗ ಕ್ಲೀನ್ ಸ್ವೀಪ್ ಸಾಧಿಸುವ ಉತ್ಸುಕತೆಯಲ್ಲಿದೆ. ಕಳೆದ 20 ವರ್ಷಗಳಿಂದ ಭಾರತದಲ್ಲಿ ಏಕದಿನ ಸರಣಿ ಗೆಲ್ಲದೇ ನಿರಾಸೆಗೊಳಾಗಿರುವ ವಿಂಡೀಸ್ ಇಂದಿನ ಪಂದ್ಯದಲ್ಲಿ ಗೆದ್ದು 3-0 ಮುಖಭಂಗ ತಪ್ಪಿಸಿಕೊಳ್ಳುವ ಒತ್ತಡದಲ್ಲಿದೆ.
ಭಾರತಕ್ಕೂ ಮಹತ್ವದ ಪಂದ್ಯ: 2017ರ ಬಳಿಕ ಟೀಂ ಇಂಡಿಯಾ ಕೂಡ ಸರಣಿ ಕ್ಲೀನ್ ಸ್ವೀಪ್ ಮಾಡಿಲ್ಲ. ಹೀಗಾಗಿ, ಇಂದಿನ ಪಂದ್ಯ ಭಾರತಕ್ಕೂ ಮಹತ್ವದ್ದಾಗಿದೆ. ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಂದಿಷ್ಟು ಬದಲಾವಣೆ ಮಾಡುವ ಸಾಧ್ಯತೆ ಇದ್ದು, ಅನುಭವಿ ಶಿಖರ್ ಧವನ್ ಕೋವಿಡ್ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಅವಕಾಶ ಸಿಗಲಿದೆ.
ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಇಶನ್ ಕಿಶನ್ ಹಾಗೂ ರಿಷಭ್ ಪಂತ್ ವೈಫಲ್ಯ ಅನುಭವಿಸಿದ್ದು ಇಂದಿನ ಪಂದ್ಯದಲ್ಲಿ ಶಿಖರ್ ಧವನ್ ಅವಕಾಶ ಪಡೆದುಕೊಳ್ಳಲಿದ್ದಾರೆ. ಇದರ ಜೊತೆಗೆ ಮೊದಲೆರಡು ಪಂದ್ಯಗಳಿಂದ ಬೆಂಚ್ ಕಾಯುತ್ತಿರುವ ಆಟಗಾರರು ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಕಾಣುತ್ತಿದೆ. ಪ್ರಮುಖವಾಗಿ ಕುಲದೀಪ್ ಯಾದವ್, ಯುವ ಬೌಲರ್ ರವಿ ಬಿಷ್ಣೋಯ್ಗೆ ಚಾನ್ಸ್ ಸಿಗುವ ಸಾಧ್ಯತೆಯೂ ಇದ್ದು, ವಾಷಿಂಗ್ಟನ್ ಅಥವಾ ಚಹಾಲ್ ಅವರನ್ನು ಹೊರಗಿಡಬಹುದು. ಆವೇಶ್ ಖಾನ್ಗೆ ಅವಕಾಶ ನೀಡಿದರೆ, ವೇಗಿ ಮೊಹಮ್ಮದ್ ಸಿರಾಜ್ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ಸತತವಾಗಿ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಒತ್ತಡ ಅವರಿಗೂ ಇದೆ. ಗಾಯದ ಕಾರಣ ಎರಡನೇ ಏಕದಿನ ಪಂದ್ಯದಿಂದ ವೆಸ್ಟ್ ಇಂಡೀಸ್ ಕ್ಯಾಪ್ಟನ್ ಕೀರನ್ ಪೊಲಾರ್ಡ್ ಹೊರಗುಳಿದಿದ್ದು, ಇಂದಿನ ಪಂದ್ಯಕ್ಕೆ ಲಭ್ಯವಾಗುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ರೋಹಿತ್ ಶರ್ಮಾ ದಾಖಲೆ: ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಹೊಸದೊಂದು ದಾಖಲೆ ನಿರ್ಮಾಣ ಮಾಡಲಿದ್ದು, ಸರಣಿ ವೈಟ್ವಾಶ್ ಗೆಲುವಿನ ತಂಡ ಮುನ್ನಡೆಸಿರುವ 8ನೇ ಭಾರತೀಯ ಕ್ಯಾಪ್ಟನ್ ಆಗಲಿದ್ದಾರೆ. ಈಗಾಗಲೇ ಕಪಿಲ್ ದೇವ್, ದಿಲೀಪ್ ವೆಂಗ್ ಸರ್ಕಾರ್, ಮೊಹಮ್ಮದ್ ಅಜರುದ್ದೀನ್, ಎಂ.ಎಸ್.ಧೋನಿ, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಹಾಗು ಅಜಿಂಕ್ಯ ರಹಾನೆ ಈ ಸಾಧನೆ ಮಾಡಿದ್ದಾರೆ.
ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್ (ಉಪನಾಯಕ), ಮಯಾಂಕ್ ಅಗರ್ವಾಲ್, ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್-ಕೀಪರ್), ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್-ಕೀಪರ್), ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಹಾಗು ಶಾರುಖ್ ಖಾನ್.
ವೆಸ್ಟ್ ಇಂಡೀಸ್: ಕೀರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಎನ್‌ಕ್ರುಮಾ ಬೋನರ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮಾರಿಯೊ ಶೆಪರ್ಡ್, ಒಡಿಯನ್ ಸ್ಮಿತ್ ಹಾಗು ಹೇಡನ್ ವಾಲ್ಶ್ ಜೂನಿಯರ್