ಹೈದರಾಬಾದ್: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಸೋಲು ಕಾಣುವ ಮೂಲಕ ಮುಖಭಂಗಕ್ಕೊಳಗಾಗಿದೆ. ಇದರೊಂದಿಗೆ ಐಸಿಸಿ ವಿಶ್ವಕಪ್ ಇತಿಹಾಸದಲ್ಲೇ(ಏಕದಿನ ಹಾಗೂ ಟಿ-20) ಪಾಕಿಸ್ತಾನ ತಂಡದ ವಿರುದ್ಧ 29 ವರ್ಷಗಳ ಬಳಿಕ ಮೊದಲ ಸಲ ಸೋಲು ಕಂಡಿರುವ ಅಪಖ್ಯಾತಿಗೆ ಪಾತ್ರವಾಗಿದೆ.
ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಭಾರತ 29 ವರ್ಷಗಳ ಬಳಿಕ ಪಾಕಿಸ್ತಾನದ ವಿರುದ್ಧ ಸೋಲು ದಾಖಲು ಮಾಡಿದೆ. ಈ ಹಿಂದೆ ಐಸಿಸಿ ಟಿ-20ಯ ಐದು ಹಾಗೂ ಏಕದಿನ ವಿಶ್ವಕಪ್ನ 7 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲು ಮಾಡಿ, ಸೋಲಿಲ್ಲದ ಸರದಾರ ಎನಿಸಿಕೊಂಡಿತು. ಆದರೆ ದುಬೈನಲ್ಲಿ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸೋಲು ಕಂಡಿದೆ. ಈ ಮೂಲಕ ಐತಿಹಾಸ ಮರುಕಳಿಸುವಲ್ಲಿ ಭಾರತ ವಿಫಲವಾಗಿದೆ.
ಇದನ್ನೂ ಓದಿರಿ: IND vs PAK: ರಿಜ್ವಾನ್-ಬಾಬರ್ ಜೊತೆಯಾಟ... ಪಾಕ್ ವಿರುದ್ಧ ಭಾರತಕ್ಕೆ ಸೋಲು
ಉಭಯ ತಂಡಗಳ(ಭಾರತ-ಪಾಕಿಸ್ತಾನ) ನಡುವೆ ಪಂದ್ಯ ನಡೆಯಬಾರದು ಎಂಬ ತೀವ್ರ ವಿರೋಧದ ನಡುವೆ ಕೂಡ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿದ್ದವು. ಪಾಕಿಸ್ತಾನದ ವಿರುದ್ಧ ಬಲಿಷ್ಠ ಭಾರತ ತಂಡ ಗೆಲುವು ಕಾಣಲಿದೆ ಎಂಬ ಇರಾದೆಯಲ್ಲಿದ್ದ ಟೀಂ ಇಂಡಿಯಾ ಕ್ರೀಡಾಭಿಮಾನಿಗಳಿಗೆ ಈ ಸೋಲು ನುಂಗಲಾರದ ತುತ್ತಾಗಿದೆ.
ಟೀಂ ಇಂಡಿಯಾ ನೀಡಿದ್ದ 152ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಆರಂಭಿಕರಾದ ನಾಯಕ ಬಾಬರ್ ಆಜಂ ಅಜೇಯ 68ರನ್ ಹಾಗೂ ರಿಜ್ವಾನ್ ಅಜೇಯ 79ರನ್ಗಳ ಜೊತೆಯಾಟ ನೀಡಿ ಜಯ ತಂದಿಟ್ಟರು. ಈ ಮೂಲಕ ವಿಶ್ವಕಪ್ನಲ್ಲಿನ ಸೋಲಿನ ಸರಪಳಿ ಕಳಚಿಕೊಂಡಿತು. ಜೊತೆಗೆ ಭಾರತದ ವಿರುದ್ಧ ಪಾಕಿಸ್ತಾನದ ಆರಂಭಿಕ ಆಟಗಾರರು ಅತಿ ಹೆಚ್ಚಿನ ರನ್ಗಳ ಜೊತೆಯಾಟವಾಡಿರುವ ದಾಖಲೆ ಸಹ ನಿರ್ಮಾಣ ಮಾಡಿದ್ದಾರೆ.