ಮುಂಬೈ(ಮಹಾರಾಷ್ಟ್ರ): 2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಇಂದು ಭಾರತ-ನ್ಯೂಜಿಲೆಂಡ್ ತಂಡಗಳು ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸಲಿವೆ. ಹೈವೋಲ್ಟೇಜ್ ಪಂದ್ಯ ಇದಾಗಿರಲಿದ್ದು ಉಭಯ ತಂಡಗಳು ಗೆಲುವಿನ ಮಂತ್ರವನ್ನೇ ಜಪಿಸುತ್ತಿವೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. ಮುಂಬೈನ ವಾಂಖೆಡೆ ಮೈದಾನ ಆತಿಥ್ಯ ವಹಿಸಿದೆ.
2019ರ ವಿಶ್ವಕಪ್ನ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತವು ಸೋಲುಂಡಿತ್ತು. ವಿಶ್ವಕಪ್ 2023ರ ಗುಂಪು ಹಂತದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಭಾರತ ಸೇಡು ತೀರಿಸಿಕೊಂಡಿತು. ಮುಯ್ಯಿಗೆ ಮುಯ್ಯೆಂಬಂತೆ ಉಭಯ ತಂಡಗಳು ಸದ್ಯ ಗೆಲುವಿನ ಲೆಕ್ಕಾಚಾರದಲ್ಲಿವೆ.
ರೋಹಿತ್ ಶರ್ಮಾ ಮುಂದಾಳತ್ವದ ಭಾರತ ಗುಂಪು ಹಂತದಲ್ಲಿ ಎಲ್ಲ 9 ಪಂದ್ಯಗಳನ್ನೂ ಗೆದ್ದರೆ, ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ 5 ಪಂದ್ಯ ಗೆದ್ದು 4 ಅನ್ನು ಕೈಚೆಲ್ಲಿದೆ. ಈ ಸಾಲಿನ ಅಭಿಯಾನದಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಸರ್ವಶ್ರೇಷ್ಠ ಸಾಲಿನಲ್ಲಿರುವ ರೋಹಿತ್ ಶರ್ಮಾ ಬಳಗಕ್ಕೆ ಇಂದಿನ ಪಂದ್ಯ ಅಗ್ನಿಪರೀಕ್ಷೆಯಾಗಿದೆ. ಉತ್ತಮ ಫಾರ್ಮ್ನಲ್ಲಿರುವ ತಂಡದ ಆಟಗಾರರು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ವಿರಾಟ್ 50ನೇ ಶತಕಕ್ಕಾಗಿ ಕ್ರಿಕೆಟ್ ಲೋಕ ಕಾದು ಕುಳಿತಿದೆ.
ಮತ್ತೊಂಡೆದೆ, ಕಿವೀಸ್ ಕೂಡ ಉತ್ತಮ ಲಯದಲ್ಲಿದೆ. ಅತ್ಯುತ್ತಮ ಆಟಗಾರರನ್ನು ಒಳಗೊಂಡಿರುವ ತಂಡದ ಬೌಲರ್ಗಳು ಎದುರಾಳಿಗಳನ್ನು ಹೆಚ್ಚು ಕಾಡಬಲ್ಲರು. ಡೆವೊನ್ ಕಾನ್ವೆ, ರಚಿನ್ ರವೀಂದ್ರ ತಮ್ಮ ಬ್ಯಾಟಿಂಗ್ನಿಂದ ಹೆಚ್ಚು ರನ್ ಗಳಿಸಬಲ್ಲರು.
ವಿಶ್ವಕಪ್ ಇತಿಹಾಸದಲ್ಲಿ ಭಾರತ- ನ್ಯೂಜಿಲೆಂಡ್ 10 ಬಾರಿ ಮುಖಾಮುಖಿಯಾಗಿವೆ. ಕಿವೀಸ್ ಐದು ಪಂದ್ಯಗಳನ್ನು ಗೆದ್ದರೆ, ಭಾರತ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ರದ್ದಾಗಿದೆ.
ಇಂದು ಮುಂಬೈನಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲದಿರುವುದು ಉಭಯ ದೇಶಗಳ ಅಭಿಮಾನಿಗಳು ಹಾಗೂ ಕ್ರಿಕೆಟಿಗರಿಗೆ ಸಂತಸ ತಂದಿದೆ. ಪಂದ್ಯಾರಂಭದಲ್ಲಿ ತಾಪಮಾನ ಸುಮಾರು 36 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪಂದ್ಯದ ಅಂತ್ಯದ ವೇಳೆಗೆ ತಾಪಮಾನವು ಸುಮಾರು 30 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ಮಳೆಯಾದರೆ ಈ ಪಂದ್ಯ ನಾಳೆ ಮೀಸಲು ದಿನದಂದು ನಡೆಯಲಿದೆ.
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ನ್ಯೂಜಿಲೆಂಡ್: ಡೆವೊನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್.
ಇದನ್ನೂ ಓದಿ: IND vs NZ: ಸೆಮೀಸ್ ಸೇಡಿಗೆ ರೋಹಿತ್ ಪಡೆ ರೆಡಿ: ಮುಂದುವರೆಯುತ್ತಾ ಭಾರತದ ಅಜೇಯ ಓಟ?