ಕೇಪ್ಟೌನ್: ಹರಿಣಗಳ ನಾಡಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಗುರಿಯೊಂದಿಗೆ ಪ್ರಯಾಣ ಬೆಳೆಸಿದ್ದ ಟೀಂ ಇಂಡಿಯಾ ನಿರಾಸೆಗೊಳಗಾಗಿದೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು 2-1ರ ಅಂತರದಿಂದ ಕೈಚೆಲ್ಲಿದ್ದು, ಈ ಮೂಲಕ ಐತಿಹಾಸಿಕ ಸಾಧನೆ ನಿರ್ಮಾಣ ಮಾಡುವ ಭಾರತದ ಕನಸು ಕನಸಾಗಿಯೇ ಉಳಿದಿದೆ. ಕೇಪ್ಟೌನ್ನಲ್ಲಿ ನಡೆದ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಅಂತರದಿಂದ ಸೋಲು ಕಂಡಿದೆ.
![Team india lose test series in SA](https://etvbharatimages.akamaized.net/etvbharat/prod-images/14187023_wdffffdfdfd.jpg)
ಕೇಪ್ಟೌನ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ತಂಡ ಕೊಹ್ಲಿ ಪಡೆಗೆ ಸೋಲಿನ ರುಚಿ ತೋರಿಸಿತು. ಪೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ 79 ರನ್ಗಳ ನೆರವಿನಿಂದ 223ರನ್ಗಳಿಕೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ 210ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಟೀಂ ಇಂಡಿಯಾ 13ರನ್ಗಳ ಮುನ್ನಡೆ ಕಾಯ್ದುಕೊಂಡಿತ್ತು.
![Team india lose test series in SA](https://etvbharatimages.akamaized.net/etvbharat/prod-images/14187023_wdfdffdfdfdf.jpg)
ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ ಕೀಪರ್ ಹೊರತುಪಡಿಸಿ ಉಳಿದೆಲ್ಲ ಪ್ಲೇಯರ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ತಂಡ 198ರನ್ಗಳಿಗೆ ಆಲೌಟ್ ಆಯಿತು. ಈ ವೇಳೆ ದಕ್ಷಿಣ ಆಫ್ರಿಕಾ ಪರ ರಬಾಡಾ, ನಿಂಗಿಡಿ ತಲಾ 3 ವಿಕೆಟ್ ಪಡೆದರೆ, ಜಾನ್ಸನ್ 4 ವಿಕೆಟ್ ಕಿತ್ತರು. ಟೀಂ ಇಂಡಿಯಾ ಪರ ರಿಷಭ್ ಪಂತ್ ಆಕರ್ಷಕ ಶತಕ ಸಿಡಿಸಿದರು.
ಸರಣಿ ನಿರ್ಣಯಿಸುವ ಪಂದ್ಯದಲ್ಲಿ ಭಾರತ ನೀಡಿದ್ದ 212 ರನ್ಗಳ ಗುರಿ ಬೆನ್ನಟ್ಟಿದ ಆತಿಥೇಯ ತಂಡ ಉತ್ತಮ ಆರಂಭ ಪಡೆದುಕೊಂಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮರ್ಕ್ರಾಮ್ 16 ರನ್ ಹಾಗೂ ಎಲ್ಗರ್ 30 ರನ್ಗಳಿಕೆ ಮಾಡಿದರು. ಇದರ ಬಳಿಕ ಮೈದಾನಕ್ಕೆ ಬಂದ ಪೀಟರ್ಸನ್ 82 ರನ್ಗಳಿಕೆ ಮಾಡಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಕೊನೆಯದಾಗಿ ಬವುಮಾ ಅಜೇಯ 32 ರನ್ ಹಾಗೂ ಡುಸೆನ್ ಅಜೇಯ 41ರನ್ಗಳಿಕೆ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ತಂಡ 63.3 ಓವರ್ಗಳಲ್ಲಿ ಕೇವಲ 3 ವಿಕೆಟ್ನಷ್ಟಕ್ಕೆ 212ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು.
ಸೆಂಚುರಿಯನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 113ರನ್ಗಳ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಸರಣಿಯಲ್ಲಿ 1--0 ಅಂತರದ ಮುನ್ನಡೆ ಪಡೆದುಕೊಂಡಿದ್ದ ಟೀಂ ಇಂಡಿಯಾ ನಂತರ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಸರಣಿ 1-1 ಅಂತರದಲ್ಲಿ ಸಮಗೊಂಡಿತ್ತು.