ಮೆಲ್ಬರ್ನ್: ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರನ್ನು ಕಟ್ಟಿ ಹಾಕುವಲ್ಲಿ ಆಸ್ಟೇಲಿಯಾ ತಂಡ ಯಶಸ್ಸು ಗಳಿಸಿದೆ. ಆದರೆ ಈ ಬಗ್ಗೆ ಆಸಿಸ್ ಸ್ಪಿನ್ನರ್ ಹೇಳೋದು ಬೇರೆ. ಅವರ ಪ್ರಕಾರ, 'ವಿಶ್ವ ದರ್ಜೆಯ ಬ್ಯಾಟ್ಸ್‌ಮನ್' ಪೂಜಾರ ಅವರಂಥವರನ್ನು ಕಟ್ಟಿ ಹಾಕುವುದು ನಿಜಕ್ಕೂ ಸವಾಲಿನ ಕೆಲಸ ಎಂದಿದ್ದಾರೆ. ಬಾಕ್ಸಿಂಗ್ ಡೇ ಪಂದ್ಯಕ್ಕೂ ಮುನ್ನ ಲಯಾನ್ ಹೇಳಿಕೆ ಆಸ್ಟ್ರೇಲಿಯಾ ತಂಡಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.
ಟೆಸ್ಟ್ ಪಂದ್ಯಗಳಲ್ಲಿ ಪೂಜಾರ ಭಾರತದ ಬ್ಯಾಟಿಂಗ್ ಲೈನ್ ಅಪ್‌ನ ಆಧಾರ ಸ್ತಂಭವಾಗಿದ್ದಾರೆ. ಹಾಗಾಗಿ, ಅವರು ರನ್ ಗಳಿಸದಂತೆ ತಡೆಯುವ ಮಾರ್ಗಗಳು ತಮ್ಮ ತಂಡದ ಬಳಿಯಿವೆ ಎಂದು ಲಯಾನ್ ಹೇಳುತ್ತಾರೆ. ಸರಣಿಯ ಎರಡನೇ ಮತ್ತು ಭಾರತಕ್ಕೆ ಮಹತ್ವದ ಟೆಸ್ಟ್ ಪಂದ್ಯ ಇದೇ ಶನಿವಾರ ಮೆಲ್ಬರ್ನ್‌ನಲ್ಲಿ ನಡೆಯುತ್ತಿದೆ.
'ನಾನು ಈ ಬಗ್ಗೆ ಯಾವುದೇ ಸೀಕ್ರೆಟ್ ಬಿಟ್ಟು ಕೊಡಲಾರೆ. ನಿಜವಾಗಿಯೂ ಪೂಜಾರ ವಿಶ್ವದರ್ಜೆಯ ಬ್ಯಾಟ್ಸ್‌ಮನ್. ಸರಣಿಯ ಮುಂದಿನ ಪಂದ್ಯಗಳಿಗೆ ಅವರು ನಮಗೆ ದೊಡ್ಡ ಸವಾಲಾಗಲಿದ್ದಾರೆ' ಎಂದು 33 ವರ್ಷದ ಲಯಾನ್ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಓದಿ: ಭಾರತ vs ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್ : ವಾರ್ನರ್, ಸೀನ್ ಅಬ್ಬಾಟ್ ತಂಡದಿಂದ ಔಟ್
ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 43 ರನ್‌ಗಳೊಂದಿಗೆ ಕ್ರೀಸ್ ಕಚ್ಚಿ ಆಡುತ್ತಿದ್ದ ಪೂಜಾರ ಅವರನ್ನು ಲಯಾನ್ ಔಟ್ ಮಾಡಿದ್ದರು. ಈ ಪಂದ್ಯವನ್ನು ಆಸ್ಟ್ರೇಲಿಯಾ 8 ವಿಕೆಟ್‌ಗಳೊಂದಿಗೆ ಕೈವಶ ಮಾಡಿಕೊಂಡಿತ್ತು. ಜೊತೆಗೆ ಭಾರತೀಯ ತಂಡ ಹೀನಾಯ ಸೋಲು ಅನುಭವಿಸಿತ್ತು.