ಮುಂಬೈ: ನನ್ನನ್ನು ಬೌಲಿಂಗ್ ಆಲ್‌ರೌಂಡರ್ ಎಂದು ಕರೆಯಬಹುದು. ಉತ್ತಮವಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದೇನೆ. ಭವಿಷ್ಯದಲ್ಲೂ ಅವಕಾಶ ಸಿಕ್ಕಾಗ ತಂಡಕ್ಕೆ ಉಪಯುಕ್ತ ರನ್ಗಳನ್ನು ನೀಡುವ ಮೂಲಕ ನೆರವಾಗಲಿದ್ದೇನೆ ಎಂದು ವೇಗಿ ಶಾರ್ದೂಲ್ ಠಾಕೂರ್ ಹೇಳಿದರು.
ನಾನು ಎರಡನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆಯುವ ಅವಕಾಶದಿಂದ ವಂಚಿತನಾಗಿದ್ದೇನೆ ಎಂಬುದರ ಬಗ್ಗೆ ವಿಷಾದವಿಲ್ಲ. ನನಗೂ ಐದು ವಿಕೆಟ್ ಪಡೆಯಬೇಕೆಂಬ ಬಯಕೆ ಇದೆ. ಸಾಕಷ್ಟು ಕಠಿಣ ಸಮಯ ಅನುಭವಿಸುತ್ತಿದ್ದ ಮೊಹಮ್ಮದ್ ಸಿರಾಜ್ಗೆ ಆ ಅವಕಾಶ ದೊರೆತಿದ್ದು, ಮತ್ತಷ್ಟು ಖುಷಿ ಕೊಟ್ಟಿದೆ. ಅವರಿಗೆ (ಸಿರಾಜ್) ಈ ಸರಣಿ ಭಾವನಾತ್ಮಕವಾದದ್ದು ಎಂದರು.
ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವುದು ಸುಲಭವಲ್ಲ, ಅಲ್ಲಿ ಅವರ ದಾಖಲೆ ಎಲ್ಲರಿಗೂ ತಿಳಿದಿದೆ. ಅವರು 1988 ರಿಂದ ಒಂದು ಟೆಸ್ಟ್ ಪಂದ್ಯವನ್ನೂ ಸೋತಿಲ್ಲ. ಕೊನೆಯ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ನಾನು ಕ್ರೀಸ್ಗೆ ಬಂದಾಗ 186ಕ್ಕೆ 6 ವಿಕೆಟ್ಗಳನ್ನು ತಂಡ ಕಳೆದುಕೊಂಡಿತ್ತು. ಆಗ ನನ್ನ ಪಾತ್ರ ಬಹಳ ಸ್ಪಷ್ಟವಾಗಿತ್ತು ಎಂದರು.
ತಂಡ ಮುನ್ನಡೆಸುವುದು ಮತ್ತು ಪರಿಸ್ಥಿತಿ ಸುಧಾರಣೆಗೆ ತರುವ ಕುರಿತು ಸುಂದರ್ ಮತ್ತು ನನಗೆ ಅರಿವಾಯಿತು. ಇಬ್ಬರೂ ಯೋಜನೆ ರೂಪಿಸಿಕೊಂಡು ಅಡಿಪಾಯ ಹಾಕಿದೆವು. ನಿಜವಾಗಿಯೂ ಅಲ್ಲಿ ಸಮಯ ಹಾಳು ಮಾಡುವುದೇ ನಮ್ಮ ಉದ್ದೇಶವಾಗಿತ್ತು. ಆದರೆ, ಬರಬರುತ್ತಾ ಆಟ ಸರಳವಾಯಿತು. ಆದ್ದರಿಂದ ಈ ಪಂದ್ಯದಲ್ಲಿ 7 ವಿಕೆಟ್ ಮತ್ತು ಅರ್ಧಶತಕಗಳಿಸಿ ಗೆಲುವಿಗೆ ಕೊಡುಗೆ ನೀಡಲು ಸಾಧ್ಯವಾಯಿತು ಎಂದು ತಮ್ಮ ಬ್ಯಾಟಿಂಗ್ ವೈಖರಿಯನ್ನು ನೆನೆಸಿಕೊಂಡರು.
ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟಸ್ಟ್ ಪಂದ್ಯದಲ್ಲಿ 2ನೇ ಇನ್ನಿಂಗ್ಸ್ನಲ್ಲಿ ಅಲ್ಪಮೊತ್ತಕ್ಕೆ ಕುಸಿದು ಸಂಕಷ್ಟದಲ್ಲಿದ್ದ ತಂಡವನ್ನು ಪಾರು ಮಾಡಿದ ಠಾಕೂರ್, ಎರಡನೇ ಪಂದ್ಯದಲ್ಲೇ ಅರ್ಧಶತಕ (67) ಬಾರಿಸಿ ಗಮನ ಸೆಳೆದರು. ವಾಷಿಂಗ್ಟನ್ ಸುಂದರ್ (62), ಠಾಕೂರ್ 7ನೇ ವಿಕೆಟ್ಗೆ 123 ರನ್ಗಳ ಜೊತೆಯಾಟ ತಂಡದ ಮತ್ತು ಸರಣಿ ಗೆಲುವಿಗೆ ಕಾರಣವಾಯಿತು. ಇತಿಹಾಸ ಬರೆಯಲೂ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ, 2018ರಲ್ಲಿ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದರು. ಅಂದು 10 ಎಸೆತಗಳನ್ನಷ್ಟೇ ಬೌಲಿಂಗ್ ಮಾಡಿದ್ದ ಠಾಕೂರ್ ಗಾಯದಿಂದ ಹೊರಗುಳಿದಿದ್ದರು.