ಮುಂಬೈ: ಅಜಿಂಕ್ಯಾ ರಹಾನೆ ನೇತೃತ್ವದ ಯುವಪಡೆಯು ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಸತತ ಮೂರನೇ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡು ಇತಿಹಾಸ ನಿರ್ಮಿಸಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದಿತು.
ಸರಣಿ ಗೆಲುವಿನ ಕುರಿತು ಈಟಿವಿ ಭಾರತದೊಂದಿಗೆ ಸಂತಸ ಹಂಚಿಕೊಂಡಿರುವ ಅಜಿಂಕ್ಯಾ ರಹಾನೆ ತಂದೆ ಮಧುಕರ್ ರಹಾನೆ ಅವರು, ಆಸ್ಟ್ರೇಲಿಯಾದ ವಿರುದ್ಧ ಅಜಿಂಕ್ಯಾ ನಾಯಕತ್ವದಲ್ಲಿ ಸರಣಿ ಗೆದ್ದಿದ್ದು ವಿಶೇಷ ಎನಿಸಿದೆ. ಈ ಬಗ್ಗೆ ತುಂಬಾ ಹೆಮ್ಮೆಯಿದೆ. ಒಬ್ಬ ತಂದೆಗೆ ಇದಕ್ಕಿಂತ ಸಂತೋಷ ಬೇಕೆ ಎಂದು ಭಾವುಕರಾದರು.
ನನ್ನ ಕುಟುಂಬದ ಪ್ರತಿಯೊಬ್ಬರಿಗೂ ಅತ್ಯಂತ ಸಂತೋಷದ ಕ್ಷಣ. ಮನೆಯಲ್ಲಿ ಸಿಹಿಯನ್ನು ಮಾಡಿ ಹಂಚಿದ್ದೇವೆ. ಸಂಬಂಧಿಕರು, ಪರಿಚಿತರು ಸೇರಿದಂತೆ ಎಲ್ಲರೂ ದೂರವಾಣಿ ಕರೆಗಳ ಮೂಲಕ ಹಾರೈಸುಸುತ್ತಿದ್ದಾರೆ. ಗೆಲುವಿಗೆ ಕಾರಣರಾದ ಭಾರತದ ಯುವಪಡೆಯ ಕಾರ್ಯಕ್ಕೆ ಶ್ಲಾಘನೀಯ. ಫೀನಿಕ್ಸ್ ಪಕ್ಷಿಯಂತೆ ಟೀಂ ಇಂಡಿಯಾ ಚಿತಾಭಸ್ಮದಿಂದ ಎದ್ದು ಆಸ್ಟ್ರೇಲಿಯಾವನ್ನು ಸೋಲಿಸಿದೆ ಎಂದು ಭಾವಪರವಶನಾದರು.
ಅಜಿಂಕ್ಯಾಗೆ ಅಭಿನಂದನೆ ಸಲ್ಲಿಸಲು ಇಚ್ಛಿಸುತ್ತೇನೆ. ಅದಕ್ಕಿಂತ ಹೆಚ್ಚು ಮಾತನಾಡಲ್ಲ. ರಹಾನೆ ಮನೆಗೆ ಆಗಮಿಸಿದ ಬಳಿಕವೇ ವಿವರವಾಗಿ ಮಾತನಾಡುತ್ತೇನೆ ಎಂದು ಐತಿಹಾಸಿಕ ಜಯದ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
2018ರಲ್ಲಿ ಆಫ್ಘಾನಿಸ್ತಾನದ ವಿರುದ್ಧ ಅಜಿಂಕ್ಯಾ ಮೊದಲ ಬಾರಿಗೆ ನಾಯಕತ್ವದ ಹೊಣೆ ಹೊತ್ತಿದ್ದರು. ನಂತರ 2017-18ರಲ್ಲಿ ಆಸ್ಟ್ರೇಲಿಯಾ, ಭಾರತ ಪ್ರವಾಸ ಕೈಗೊಂಡಾಗ ಒಂದು ಪಂದ್ಯಕ್ಕೆ ನಾಯಕತ್ವ ವಹಿಸಿದ್ದರು. ನಿನ್ನೆಗೆ ಅಂತ್ಯಕಂಡ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಿಂದ ಮೂರು ಪಂದ್ಯಗಳನ್ನು ರಹಾನೆ ಮುನ್ನಡೆಸಿದರು.
ಅಲ್ಲದೆ, ಮೂರು ಪಂದ್ಯಗಳಿಗೆ ನಾಯಕನಾಗಿದ್ದ ರಹಾನೆ, 2 ಪಂದ್ಯಗಳಲ್ಲಿ ಗೆದ್ದು, ಒಂದು ಡ್ರಾ ಮಾಡಿಕೊಂಡಿದ್ದಾರೆ. ಈವರೆಗೂ ರಹಾನೆ ನಾಯಕತ್ವದಲ್ಲಿ 5 ಪಂದ್ಯಗಳನ್ನು ಭಾರತ ತಂಡ ಆಡಿದ್ದು, ಅದರಲ್ಲಿ 4 ಗೆಲುವು ಸಾಧಿಸಿದ್ದರೆ, ಒಂದು ಡ್ರಾನಲ್ಲಿ ಅಂತ್ಯ ಕಂಡಿದೆ.