ಹೈದರಾಬಾದ್: ಪ್ರತಿಷ್ಠಿತ ಬಾರ್ಡರ್-ಗಾವಸ್ಕರ್ ಟ್ರೋಫಿ ಗೆದ್ದಿರುವ ಅಜಿಂಕ್ಯ ರಹಾನೆಯನ್ನೇ ಟೆಸ್ಟ್ ಮಾದರಿಗೆ ನಾಯಕನಾಗಿ ಮಾಡಬೇಕು. ವಿರಾಟ್ ಕೊಹ್ಲಿಗೆ ಏಕದಿನ, ರೋಹಿತ್ ಶರ್ಮಾರನ್ನು ಟಿ20ಗೆ ಕಪ್ತಾನನ್ನಾಗಿ ಮಾಡಿ ಎಂಬ ಒತ್ತಾಯಗಳು ಕೇಳಿಬರುತ್ತಿವೆ. ವಿರಾಟ್ ಕೊಹ್ಲಿಗೆ ಮೂರು ಮಾದರಿಗಳ ಕ್ರಿಕೆಟ್ಗೆ ನಾಯಕತ್ವ ಬೇಡ. ಒಬ್ಬೊಬ್ಬರಿಗೂ ಒಂದೊಂದನ್ನು ಹಂಚಿಕೆ ಮಾಡಿ ಎಂದು ಮಾಜಿ ಕ್ರಿಕೆಟಿಗರೂ ಹೇಳುತ್ತಿದ್ದಾರೆ.
ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿತ್ತು. ಆ ಪಂದ್ಯಕ್ಕೆ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿದ್ದರು. ಅದಾದ ನಂತರ ಪಿತೃತ್ವ ರಜೆಯ ಮೇಲೆ ತವರಿಗೆ ಮರಳಿದರು. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ಸಾರಥ್ಯ ವಹಿಸಿಕೊಂಡ ಅಂಜಿಕ್ಯ ರಹಾನೆ ಮೂರು ಟೆಸ್ಟ್ಗಳಲ್ಲಿ ಎರಡು ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯ ಡ್ರಾ ಮಾಡಿಕೊಂಡಿದ್ದರು. ಹೀಗಾಗಿ, ನಾಯಕತ್ವ ಬದಲಾವಣೆ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.
ಇದನ್ನೂ ಓದಿ: BMW ಕಾರು ಖರೀದಿಸಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್
ಈ ಕುರಿತು ಪ್ರತಿಕ್ರಿಯಿಸಿರುವ ಆಸೀಸ್ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್, ಅಜಿಂಕ್ಯ ರಹಾನೆ ಅವರಂತಹ ನಾಯಕತ್ವ ಅಗತ್ಯ ಎಂದು ಕೆಲವರು ಭಾವಿಸುತ್ತಿದ್ದಾರೆ. ನಾಯಕತ್ವ ಬದಲಾವಣೆ ಮಾಡುವುದರಿಂದ ಭಾರತ ತಂಡದ ಸಂಸ್ಕೃತಿ ನಾಶಕ್ಕೆ ಕಾರಣವಾಗಬಹುದು. ಒಂದು ವೇಳೆ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ಕಿತ್ತು ಹಾಕಿದರೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಾಣಬಹುದು. ಇದು ತಂಡಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.
ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಾರೆ. ನೀವು ಅವರನ್ನು ಬದಲಾಯಿಸಿದರೆ ತಂಡದ ಸಂಸ್ಕೃತಿಯನ್ನು ಹಾಳು ಮಾಡುತ್ತದೆ ಎಂದು ಭಾವಿಸುತ್ತೇನೆ. ಕೊಹ್ಲಿಯ ಬ್ಯಾಟಿಂಗ್ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗೆ ಯಾರೊಬ್ಬರೂ ಬಯಸುವುದಿಲ್ಲ ಎಂದು ಹೇಳಿದ್ದಾರೆ.
ರಹಾನೆ ನಾಯಕತ್ವವನ್ನು ಹೊಗಳಿದ ಅವರು, ಆಸ್ಟ್ರೇಲಿಯಾದಲ್ಲಿ ಉತ್ತಮ ಸಾಧನೆ ಮಾಡಿರುವ ರಹಾನೆ, ಶಾಂತ ಸ್ವರೂಪದ ವ್ಯಕ್ತಿ. ನಾಯಕನಾಗಿಯೂ ಬಲ ಪ್ರದರ್ಶನ ತೋರಿದ್ದಾರೆ. ಆದರೆ, ಅವರು ಉಪನಾಯಕನಾಗಿರುವುದೇ ಉತ್ತಮ ಎಂದು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.