ಸಿಡ್ನಿ: ನವೆಂಬರ್ 27ರಿಂದ ಆರಂಭವಾಗುವ ಏಕದಿನ ಮತ್ತು ಟಿ-20 ಪಂದ್ಯ ಸರಣಿ ಮತ್ತು ಸ್ವದೇಶಕ್ಕೆ ಮರಳುವ ಮೊದಲು ನಡೆಯುವ ಮೊದಲ ಟೆಸ್ಟ್ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಆಸ್ಟ್ರೇಲಿಯಾ ತಂಡ ಕಠಿಣ ಸವಾಲೊಡ್ಡಲಿದೆ. ಅದಕ್ಕೆ ಕೊಹ್ಲಿಯೇ ನಮಗೆ ಪ್ರೇರಣೆ ಎಂದು ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಹೇಳಿದರು.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದು ನಮ್ಮ ತಂಡಕ್ಕೆ ಹೆಚ್ಚು ಲಾಭ ತಂದುಕೊಡುವ ಸಾಧ್ಯತೆಯೂ ಇದೆ. ಆದರೆ, ಅವರು ಸ್ವದೇಶಕ್ಕೆ ಮರಳುವ ಮುನ್ನ ಜರುಗುವ ಪಂದ್ಯಗಳಲ್ಲಿ ಅವರನ್ನು ಎದುರಿಸಲು ನಮ್ಮದೇ ಆದ ಕಾರ್ಯತಂತ್ರಗಳನ್ನು ರೂಪಿಸಿದ್ದೇವೆ. ಈ ಹಿಂದಿನ ಸರಣಿಗಳಲ್ಲೂ ಕೊಹ್ಲಿ ಹೆಚ್ಚು ರನ್ ಗಳಿಸದಂತೆ ಕಟ್ಟಿಹಾಕಲು ಎಷ್ಟೋ ಯೋಜನೆಗಳನ್ನು ಹಾಕಿಕೊಂಡಿದ್ದೆವು. ಆದರೂ ಅವೆಲ್ಲವನ್ನೂ ಮೀರಿ ಉತ್ತಮ ಪ್ರದರ್ಶನ ತೋರಿದ್ದರು ಎಂದರು.
ಈಗವರ ವಿರುದ್ಧ ಕಠಿಣ ಸವಾಲು ನೀಡಲು ಅವರೇ ನಮಗೆ ಪ್ರೇರಣೆ. ಈ ಹಿಂದೆ ಮಾಡಿದ ಅನೇಕ ತಪ್ಪುಗಳಿಗೆ ಉತ್ತರ ಕಂಡುಕೊಂಡಿದ್ದೇವೆ. ಅವರೊಬ್ಬ ಉತ್ತಮ ಆಟಗಾರ. ಪ್ರತಿ ಪಂದ್ಯಕ್ಕೂ ತನ್ನದೇಯಾದ ರೀತಿ ವಿಭಿನ್ನವಾಗಿ ತಯಾರಾಗುತ್ತಾರೆ. ಆತ ಹೆಚ್ಚು ರನ್ ಕದಿಯಲು ಬಿಡದೇ ಕಟ್ಟಿಹಾಕಲು ಹಿಂದಿನ ಯೋಜನೆಗಳ ಜೊತೆ ಹೊಸ ತಂತ್ರಗಳನ್ನು ರೂಪಿಸುತ್ತಿದ್ದೇವೆ. ಈ ಮೂಲಕ ಅವರಿಗೆ ಹೆಚ್ಚು ಕಠಿಣ ಸ್ಪರ್ಧೆ ನೀಡಲಿದ್ದೇವೆ ಎಂದು ಹೇಳಿದರು.
13ನೇ ಆವೃತ್ತಿಯ ಐಪಿಎಲ್ನಲ್ಲಿ ರನ್ನರ್ಅಪ್ ಆದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಲ್‌ರೌಂಡರ್ ಸ್ಟೋಯ್ನಿಸ್, ಟೂರ್ನಿ ಉದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದರು. 352 ರನ್ ಗಳಿಸಿ ಮತ್ತು 17 ವಿಕೆಟ್ ಪಡೆದಿದ್ದರು. ಸ್ಟೋಯ್ನಿಸ್ 2019ರ ಐಪಿಎಲ್ನಲ್ಲಿ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದರು.