ಕೊಲಂಬೊ: ಕೊರೊನಾ ವೈರಸ್ನಿಂದ ಉಂಟಾಗಿರುವ ನಷ್ಟವನ್ನು ತುಂಬಲು ಭಾರತ ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ 3 ಟಿ20 ಪಂದ್ಯಗಳ ಬದಲಿಗೆ 5 ಟಿ20 ಪಂದ್ಯಗಳನ್ನಾಡಲು ಒಪ್ಪಿಗೆ ಸೂಚಿಸಿದೆ ಎಂದು ಲಂಕಾ ಕ್ರಿಕೆಟ್ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಭಾರತ 3 ಟಿ20 ಪಂದ್ಯಗಳನ್ನಾಡಬೇಕಿತ್ತು. ಆದರೆ ಈ ವರ್ಷ ಶ್ರೀಲಂಕಾ 3 ಏಕದಿನ ಪಂದ್ಯಗಳನ್ನು ಸೇರಿಸಿತ್ತು. ಇದೀಗ ಬಿಸಿಸಿಐಗೆ ಮನವಿ ಮಾಡಿದ್ದು, 3 ಟಿ20 ಪಂದ್ಯಗಳ ಬದಲು 5 ಟಿ20 ಪಂದ್ಯಗಳನ್ನಾಡಲು ಒಪ್ಪಿಗೆ ಪಡೆದಿದೆ.
ಮುಂಬರುವ ಪ್ರವಾಸದಲ್ಲಿ ಭಾರತ ಯೋಜಿಸಿರುವ ಪಂದ್ಯಗಳಿಗಿಂತ ಹೆಚ್ಚು ಪಂದ್ಯಗಳನ್ನಾಡಲು ಒಪ್ಪಿಗೆ ಸೂಚಿಸಿದೆ. ಇದರಿಂದ ಟಿವಿ ರೈಟ್ಸ್ನಿಂದ ಹೆಚ್ಚು ಆದಾಯ ಬರಲಿದೆ ಎಂದು ಎರಡನೇ ಬಾರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಆಯ್ಕೆಯಾಗಿರುವ ಶಮ್ಮಿ ಸಿಲ್ವಾ ತಿಳಿಸಿದ್ದಾರೆ.
ಇದನ್ನು ಓದಿ: ಶ್ರೀಲಂಕಾ ಸರಣಿ: ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್
ಆದರೆ ಕಳೆದ ವರ್ಷಗಳ ಪ್ರವಾಸಗಳ ರದ್ದತಿಯಿಂದ ಬೋರ್ಡ್ ಎಷ್ಟು ನಷ್ಟ ಅನುಭವಿಸಿದೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಆದರೆ ಮುಂದೆ ಲಂಕಾ ಪ್ರವಾಸ ಕೈಗೊಳ್ಳುವ ಎಲ್ಲಾ ತಂಡಗಳಿಗೇ ಇಷ್ಟೇ ಪಂದ್ಯಗಳನ್ನಾಡುವುದಕ್ಕೆ ಮನವಿ ಮಾಡಲಿದೆ ಎಂದು ಸಿಲ್ವಾ ಹೇಳಿದ್ದಾರೆ.
ಶ್ರೀಲಂಕಾ ಆಗಸ್ಟ್ನಲ್ಲಿ ದಕ್ಷಿಣ ಆಫ್ರಿಕಾಗೆ, ಸೆಪ್ಟೆಂಬರ್ನಲ್ಲಿ ಸ್ಕಾಂಟ್ಲೆಂಡ್ ಮತ್ತು ನವೆಂಬರ್ನಲ್ಲಿ ಅಫ್ಘಾನಿಸ್ತಾನಕ್ಕೆ ಆತಿಥ್ಯ ವಹಿಸಲಿದೆ. ಪ್ರಸ್ತುತ ಶ್ರೀಲಂಕಾ ತಂಡ ಸೀಮಿತ ಓವರ್ಗಳ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದೆ.