ದುಬೈ(ಯುಎಇ): ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ನಿಧಾನಗತಿಯ ಬೌಲಿಂಗ್ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಪಂದ್ಯದ ತಲಾ ಶೇ.40ರಷ್ಟು ದಂಡ ವಿಧಿಸಲಾಗಿದೆ. ರವಿವಾರ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಿದ್ದವು. ಟೀಂ ಇಂಡಿಯಾ 5 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿತ್ತು.
ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ಜೆಫ್ ಕ್ರೋವ್ ಅವರು, ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ನಾಯಕತ್ವದ ತಂಡಗಳಿಗೆ ದಂಡದ ಬರೆ ಎಳೆದಿದ್ದಾರೆ. ಎರಡೂ ತಂಡಗಳು ತಮ್ಮ ನಿಗದಿತ ಸಮಯದಲ್ಲಿ ಎರಡು ಓವರ್ ಕಡಿಮೆ ಎಸೆದಿದ್ದಾರೆ ಎಂದು ತಿಳಿಸಿದ್ದಾರೆ.
ಐಸಿಸಿ ನಿಯಮಗಳ ಪ್ರಕಾರ, ಆಟಗಾರರು ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲರಾದರೆ ಪ್ರತಿ ಓವರ್‌ಗೆ ತಮ್ಮ ಪಂದ್ಯದ ಶುಲ್ಕದ ಶೇ.20ರಷ್ಟು ದಂಡ ವಿಧಿಸಬಹುದು. ಮೊನ್ನೆ ನಡೆದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಸಂಬಂಧ ಇಬ್ಬರೂ ನಾಯಕರು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಕುರಿತು ವಿಚಾರಣೆಯ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಸ್ಲೋ ಓವರ್ ರೇಟ್ ಕುರಿತಾಗಿ ಅಂಪೈರ್‌ಗಳಾದ ಮಸುದುರ್ ರೆಹಮಾನ್ ಮತ್ತು ರುಚಿರ ಪಿಲ್ಲಿಯಗುರುಗೆ ಹಾಗೂ ಮೂರನೇ ಅಂಪೈರ್ ರವೀಂದ್ರ ವಿಮಲಸಿರಿ ಮತ್ತು ನಾಲ್ಕನೇ ಅಂಪೈರ್ ಗಾಜಿ ಸೊಹೆಲ್ ಆರೋಪಿಸಿದ್ದರು. ಪಾಕಿಸ್ತಾನ ತಂಡ 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಗಿತ್ತು. 148 ರನ್ಗಳ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ 19.4 ಓವರ್ಗಳಲ್ಲಿ ಗೆಲುವಿನ ನಗೆ ಬೀರಿತ್ತು.
ಇದನ್ನೂ ಓದಿ: Asia Cup 2022: ಪಾಕ್ ವಿರುದ್ಧ ಅಬ್ಬರಿಸಿದ ಪಾಂಡ್ಯ.. ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಭಾರತ