ಬ್ಲೋಮ್‌ಫಾಂಟೈನ್: ನಾಯಕ ಪ್ರಿಯಾಂಕ್ ಪಾಂಚಾಲ್ (45*), ಪೃಥ್ವಿ ಶಾ (48) ಮತ್ತು ಅಭಿಮನ್ಯು ಈಶ್ವರನ್ (27*) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡವು ಮೊದಲ ನಾಲ್ಕು ದಿನಗಳ ಪಂದ್ಯದಲ್ಲಿ 2ನೇ ದಿನದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 125 ಗಳಿಸಿದೆ. ಆದರೆ ಟೀಂ ಇಂಡಿಯಾವು 384 ರನ್‌ಗಳ ಹಿನ್ನಡೆಯಲ್ಲಿದೆ.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಎ ತಂಡವು ಬೃಹತ್ ಮೊತ್ತ (509/7) ದಾಖಲಿಸಿದೆ. ಪ್ರತ್ಯುತ್ತರವಾಗಿ, ಭಾರತ ಎ ಆರಂಭಿಕರಾದ ಪಾಂಚಾಲ್ ಮತ್ತು ಶಾ 80 ರನ್‌ಗಳ ವೇಗದ ಜೊತೆಯಾಟದ ಮೂಲಕ ಉತ್ತಮ ಅಡಿಪಾಯ ಹಾಕಿದರು. ಆಕ್ರಮಣಕಾರಿ ಆಟವಾಡಿದ ಶಾ 45 ಎಸೆತಗಳಲ್ಲಿ 9 ಬೌಂಡರಿಗಳನ್ನು ಒಳಗೊಂಡ 48 ರನ್ ಬಾರಿಸಿ ಅರ್ಧಶತಕದಿಂದ ವಂಚಿತರಾದರು.
ಬಳಿಕ ಪಾಂಚಾಲ್ ಸೇರಿಕೊಂಡ ಈಶ್ವರನ್ ರಕ್ಷಣಾತ್ಮಕ ಆಟದ ಮೂಲಕ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಬ್ಬರು ಮುರಿಯದ 2ನೇ ವಿಕೆಟ್ಗೆ 45 ರನ್‌ಗಳ ಜೊತೆಯಾಟ ನಡೆಸಿದ್ದಾರೆ.
ಇದಕ್ಕೂ ಮೊದಲು ಮೊದಲ ದಿನ 3 ವಿಕೆಟ್ಗೆ 343 ರನ್ ಬಾರಿಸಿದ್ದ ಹರಿಣಗಳು 2ನೇ ದಿನದಂದು ಮೊತ್ತವನ್ನು 509ಕ್ಕೆ ಕೊಂಡೊಯ್ದರು. ಬ್ಯಾಟರ್ಗಳಾದ ಪೀಟರ್ ಮಲನ್ 163, ಟೋನಿ ಡಿ ಜೊರ್ಜಿ 117 ರನ್ ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಭಾರತದ ಪರ ನವದೀಪ್ ಸೈನಿ 67ಕ್ಕೆ 2, ಅರ್ಜಾನ್ ನಾಗ್ವಾಸ್ವಾಲ್ಲಾ 75ಕ್ಕೆ 2 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: IND vs NZ: ಕಿವೀಸ್ ವಿರುದ್ಧ ಟಾಸ್ ಭಾರತ ಬ್ಯಾಟಿಂಗ್ ಆಯ್ಕೆ