ಹುಬ್ಬಳ್ಳಿ: ನಗರದ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ನ್ಯೂಜಿಲ್ಯಾಂಡ್ ಎ ತಂಡದ ವಿರುದ್ಧ ಆರಂಭಗೊಂಡಿರುವ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಎ ತಂಡವು 66 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್ ಗಳಿಸಿದೆ.
ಮೈದಾನದಲ್ಲಿ ತೇವಾಂಶ ಹೆಚ್ಚಿದ್ದ ಕಾರಣ ಬೆಳಗ್ಗೆ 10:35ರವರೆಗೆ ಪಂದ್ಯ ಆರಂಭವಾಯಿತು. ಭಾರತದ ಪರ ನಾಯಕ ಪ್ರಿಯಾಂಕ್ ಪಾಂಚಾಲ್ ಹಾಗೂ ಅಭಿಮನ್ಯು ಈಶ್ವರನ್ ಇನ್ನಿಂಗ್ಸ್ ಆರಂಭಿಸಿದರು. ಈಶ್ವರನ್ 36 ಎಸೆತಗಳಲ್ಲಿ 26 ರನ್ ಗಳಿಸಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಬಳಿಕ ನಂತರ ನಾಯಕನ ಜೊತೆಗೂಡಿದ ರುತುರಾಜ ಗಾಯಕ್ವಾಡ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ತಂಡದ ಮೊತ್ತ 53 ಆಗಿದ್ದಾಗ ಲಾಗನ್ ವಾನ್ ಬಿಕ್ ಬೌಲಿಂಗ್‌ನಲ್ಲಿ ಗಾಯಕವಾಡ್(5 ರನ್) ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರ ನಡೆದರು.
ಊಟದ ವಿರಾಮಕ್ಕೆ ಭಾರತ 19 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 57 ರನ್ ಪೇರಿಸಿತ್ತು. ನಂತರ ಕ್ರೀಸ್ಗೆ ಬಂದ ರಜತ್ ಪಾಟಿದಾರ್(4) ಸಹ ಬೇಗ ಪೆವಿಲಿಯನ್ ಸೇರಿಕೊಂಡರು. ಒಂದೆಡೆ ನಿರಂತರವಾಗಿ ವಿಕೆಟ್ ಪತನವಾಗುತ್ತಿದ್ದರೂ ಏಕಾಂಗಿಯಾಗಿ ನಾಯಕನ ಆಟವಾಡಿದ ಪ್ರಿಯಾಂಕ್ ಪಾಂಚಾಲ್, 87 ರನ್ ಬಾರಿಸಿ ಸಿನ್ ಸೊಲಿಯಾ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿದರು. ಪಾಂಚಾಲ್ಗೆ ಉತ್ತಮ ಸಾಥ್ ನೀಡಿದ ಕೆ.ಎಸ್.ಭರತ್ ಅರ್ಧಶತಕದ ಕಾಣಿಕೆ ನೀಡಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 26 ರನ್ ಬಾರಿಸಿದ್ದ ಶಾರ್ದುಲ್ ಠಾಕೂರ್ ಕೂಡ ರಚಿನ ರವೀಂದ್ರ ಬೌಲಿಂಗ್‌ನಲ್ಲಿ ಔಟಾದರು.
ಗುರುವಾರವೇ ಆರಂಭವಾಗಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಇಂದೂ ಕೂಡ ಆಗಾಗ ವರುಣನ ಅಡಚಣೆ ಮುಂದುವರೆಯಿತು. ದಿನದಾಟದ ಅಂತ್ಯಕ್ಕೆ ಭಾರತವು 66 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್ ಗಳಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ IND vs NZ A Test: 2 ವಿಕೆಟ್ ಕಳೆದುಕೊಂಡ ಭಾರತಕ್ಕೆ ಆರಂಭಿಕ ಆಘಾತ