ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದ ಟಿಕೆಟ್ಗಳ ಖರೀದಿಗಾಗಿ ನೂಕುನುಗ್ಗಲು ಮತ್ತು ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ (ಹೆಚ್ಸಿಎ) ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಟಿಕೆಟ್ ಮಾರಾಟ ಮಾಡುವ ಪ್ರಕ್ರಿಯೆಗೆ ಕಿಡಿಕಾರಿರುವ ಕ್ರೀಡಾಭಿಮಾನಿಗಳು ಈ ಗಲಾಟೆಗೆ ಹೆಚ್ಸಿಎ ನೇರ ಕಾರಣ ಎಂದು ಆರೋಪ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಹ ನೀಡಲಾಗಿದೆ. ಟಿಕೆಟ್ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಸುದ್ದಿ ಕ್ರೀಡಾಭಿಮಾನಿಗಳಲ್ಲಿ ಕಿಚ್ಚು ಹೊತ್ತಿಸಿದ್ದು ಅಜರುದ್ದೀನ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಈ ದುರ್ಘಟನೆಗೆ ಅಜರುದ್ದೀನ್ ನೇರ ಹೊಣೆಗಾರರು. ಹಾಗಾಗಿ ಈ ಕೂಡಲೇ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಲ್ಲದೇ ಅವರನ್ನು ಹುದ್ದೆಯಿಂದ ತತಕ್ಷಣ ವಜಾಗೊಳಿಸಬೇಕು ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥಗೆ ಕ್ರೀಡಾಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.
ಕ್ರೀಡಾಭಿಮಾನಿಗಳ ಮೇಲೆ ಲಾಠಿ ಪ್ರಹಾರಕ್ಕೆ ಕಾರಣರಾದ ಅಜರುದ್ದೀನ್ ಹಾಗೂ ಹೆಚ್ಸಿಎ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಐಸಿಎಎಸ್‌ಎ ಅಧ್ಯಕ್ಷೆ ರಾಚಲ ಯುಗೇಂದರ್ ಗೌಡ್ ಒತ್ತಾಯ ಮಾಡಿದ್ದಾರೆ. ಜಿಮ್ಖಾನಾ ಮೈದಾನದಲ್ಲಿ ನೂಕುನುಗ್ಗಲು ಉಂಟಾಗಲು ಹೆಚ್ಸಿಎ ಜತೆಗೆ ಸರ್ಕಾರದ ನಿರ್ಲಕ್ಷ್ಯವೂ ಮುಖ್ಯ ಕಾರಣ ಎಂದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದ ಟಿಕೆಟ್ ಮಾರಾಟ ಮಾಡುವಲ್ಲಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿಫಲವಾಗಿದೆ. ಟಿಕೆಟ್ಗೆ ಸೂಕ್ತ ವ್ಯವಸ್ಥೆ ಮಾಡದಿದ್ದರೂ ಕ್ರೀಡಾಭಿಮಾನಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದೆ.
ಸಾಲದು ಎಂಬಂತೆ ಟಿಕೆಟ್ಗಾಗಿ ನೂಕುನುಗ್ಗಲು ಹಾಗೂ ಕಾಲ್ತುಳಿತದಿಂದ ಹಲವರು ಗಾಯಗೊಂಡಿದ್ದು, ಅವರನ್ನು ವಿಚಾರಿಸಲು ಬರದಿರುವುದು ಕೂಡ ಬೇಸರ ತರಿಸಿದೆ. ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.
ಇದನ್ನೂ ಓದಿ: ಭಾರತ ಆಸ್ಟ್ರೇಲಿಯಾ T20 ಪಂದ್ಯ.. ಹೈದರಾಬಾದ್ನಲ್ಲಿ ಟಿಕೆಟ್ ಖರೀದಿಗಾಗಿ ಭಾರಿ ಕಾಲ್ತುಳಿತ