ಮೆಲ್ಬೋರ್ನ್: ತಂಡದಲ್ಲಿ ಆಳವನ್ನು ಸೃಷ್ಟಿಸುವಲ್ಲಿ ಆಸ್ಟ್ರೇಲಿಯಾ ಭಾರತವನ್ನು ಅನುಕರಿಸುವ ಅವಶ್ಯಕತೆಯಿದೆ. ಇದರಿಂದ ಟಾಪ್ ಆಟಗಾರರಿಗೆ ವಿಶ್ರಾಂತಿ ನೀಡುವುದರ ಜೊತೆಗೆ ಅವರಲ್ಲಿ ಹೊಸತನವನ್ನುಂಟು ಮಾಡಬಹುದು ಎಂದು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೇನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದ ಟಾಪ್ ಕ್ರಿಕೆಟಿಗರು ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಟೆಸ್ಟ್ ಸರಣಿಗಾಗಿ ಮುರೂವರೆ ತಿಂಗಳ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆದರೆ, ಬಿಸಿಸಿಐ ಈಗಾಗಲೇ ದೇಶದ ಪರ 20 ಸದಸ್ಯರ ಮತ್ತೊಂದು ತಂಡವನ್ನು ಶ್ರೀಲಂಕಾ ವಿರುದ್ಧದ ವೈಟ್ಬಾಲ್ ಸರಣಿಗೆ ಆಯ್ಕೆ ಮಾಡಿದೆ.
ಇನ್ನು ಆಸ್ಟ್ರೇಲಿಯಾ ಮುಂದಿನ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಬೇಕಿದೆ. ಆದರೆ, ಬಯೋಬಬಲ್ನಿಂದ ವಿಶ್ರಾಂತಿ ಬಯಸಿರುವ ಟಿಮ್ ಪೇನ್, ವಾರ್ನರ್ ಮತ್ತು ಸ್ಮಿತ್ ಸೇರಿದಂತೆ ಕೆಲವು ಟಾಪ್ ಕ್ರಿಕೆಟಿಗರು ವಿಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಈ ಕಾರಣದಿಂದ ಪೇನ್ ತಂಡದಲ್ಲಿ ಆಳವನ್ನು ಸೃಷ್ಟಿಸಲು ಆಸ್ಟ್ರೇಲಿಯಾ ಬಿಸಿಸಿಐನಂತೆ ಯುವಕರಿಗೆ ಅವಕಾಶ ನೀಡುವ ಮೂಲಕ ಸೀನಿಯರ್ ಕ್ರಿಕೆಟಿಗರಿಂದ ವರ್ಕ್ಲೋಡ್ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಈಗ ನಮ್ಮ ತಂಡದಲ್ಲಿ ಸಾಮರ್ಥ್ಯವುಳ್ಳ ಆಟಗಾರರನ್ನು ಗುರುತಿಸಿ ತಂಡದ ಬೆಂಚ್ ಬಲವನ್ನು ಹೆಚ್ಚಿಸುವುದು ಆಸ್ಟ್ರೇಲಿಯಾಕ್ಕೆ ಪ್ರಮುಖ ವಿಷಯವಾಗಿದೆ. ತಾತ್ವಿಕವಾಗಿ ನಾವು ಪ್ರವಾಸದಿಂದ ಹೊರ ಬರುವ ಹುಡುಗರನ್ನು ಹೊಂದಿಲ್ಲ. ಆದರೆ, ಕೆಲವೊಂದು ಕಾರಣಗಳಿಂದ ವಿಶ್ರಾಂತಿ ಬಯಸಿದಾಗ ನಾವು ಬೇರೆ ಯೋಜನೆ ಮಾಡಬೇಕಿರುತ್ತದೆ ಎಂದು ಪೇನ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ನಾವು ಈ ಸಂದರ್ಭದಲ್ಲಿ ಭಾರತವನ್ನು ನೋಡಿದಾಗ, ಅವರು ಅದ್ಭುತವಾಗಿ ತಂಡದ ಸಮತೋಲನವನ್ನು ನಿರ್ವಹಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ಅನ್ನು ಆಡಬಲ್ಲಂತಹ ನೈಜ ಪ್ರತಿಭೆಗಳನ್ನು ತಂಡದಲ್ಲಿ ಹೊಂದಿದ್ದಾರೆ. ನಮ್ಮ ಅತ್ಯುತ್ತಮ ಆಟಗಾರರು ವಿಶ್ರಾಂತಿ ಬಯಸಿದಾಗ ನಮಗೂ ಅಂತಹ ಪ್ರತಿಭಾನ್ವಿತ ಆಟಗಾರರ ಅವಶ್ಯಕತೆಯಿದೆ. ವಿಶ್ರಾಂತಿ ನಂತರ ಉತ್ತಮ ಆಟಗಾರರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು ಎಂದು ಪೇನ್ ಹೇಳಿದ್ದಾರೆ.
ಇದನ್ನು ಓದಿ: ಭಾರತ v/s ನ್ಯೂಜಿಲ್ಯಾಂಡ್ : ಟಿಮ್ ಪೇನ್ ಪ್ರಕಾರ ಈ ತಂಡ ಸುಲಭವಾಗಿ WTC ಗೆಲ್ಲಲಿದೆ