ಮುಂಬೈ: ಸತತ ಎರಡೂ ಅಪಮಾನಕರ ಸೋಲಿಗೆ ತುತ್ತಾಗಿರುವ ಆರ್ಸಿಬಿ ಮುಂದಿನ ಪಂದ್ಯಗಳಲ್ಲಿ ಜಯ ಸಾಧಿಸಿ ಪ್ಲೇ ಆಫ್ ಪ್ರವೇಶಿಸಬೇಕೆಂದರೆ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳು ರನ್ಗಳಿಸಬೇಕು. ಒಂದು ವೇಳೆ ಈ ಮೂವರು ವಿಫಲರಾದರೆ ಬೆಂಗಳೂರು ಫ್ರಾಂಚೈಸಿ ನಾಕೌಟ್ ಪ್ರವೇಶಿಸುವುದು ಅನುಮಾನ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಮಂಗಳವಾರ ರಾಜಸ್ಥಾನ್ ವಿರುದ್ಧ ಕೇವಲ 145 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಲಾಗದೇ ಆರ್ಸಿಬಿ 29 ರನ್ಗಳಿಂದ ಸೋಲು ಕಂಡಿತು. ಇದಕ್ಕೂ ಹಿಂದಿನ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ 68 ರನ್ಗಳಿಗೆ ಆಲೌಟ್ ಆಗಿ ಮುಜುಗರ ಅನುಭವಿಸಿತ್ತು. ಈಗಾಗಲೇ 10 ಅಂಕಗಳನ್ನು ಹೊಂದಿರುವ ಆರ್ಸಿಬಿ ಉಳಿದ 5 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳಲ್ಲಾದರೂ ಗೆಲ್ಲಲೇಬೇಕಿದೆ. ಆದರೆ ತಂಡದ ಬ್ಯಾಟಿಂಗ್ ವೈಫಲ್ಯ ದೊಡ್ಡ ಸಮಸ್ಯೆಯಾಗಿದೆ.
ವಿರಾಟ್ ಕೊಹ್ಲಿ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಇನ್ನು ನಾಯಕ ಡುಪ್ಲೆಸಿಸ್ ಒಂದು ಪಂದ್ಯ ಆಡಿದರೆ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸುತ್ತಿದ್ದರೆ, ಕಳೆದ ವರ್ಷ ತಂಡದ ಆಪದ್ಬಾಂಧವನಾಗಿದ್ದ ಮ್ಯಾಕ್ಸ್ವೆಲ್ ಮಂಕಾಗಿದ್ದಾರೆ. ಆರ್ಸಿಬಿ ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ, ಈ ಮೂವರು ದೊಡ್ಡ ಆಟಗಾರರು ಆರ್ಸಿಬಿಗೆ ರನ್ ಗಳಿಸಬೇಕೆಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
"ಟಿ20 ಪಂದ್ಯದಲ್ಲಿ 29 ರನ್ಗಳ ಸೋಲು ದೊಡ್ಡ ವಿಷಯ. ಅದರಲ್ಲೂ ತಂಡ 145 ರನ್ಗಳ ಸಾಧಾರಣ ಗುರಿ ಹಿಂಬಾಲಿಸುವಾಗ. ಆರ್ಸಿಬಿ ಹಿಂದಿನ ಪಂದ್ಯದಲ್ಲಿ 68 ರನ್ಗಳಿಗೆ ಆಲೌಟ್ ಆದರೆ, ಈ ಪಂದ್ಯದಲ್ಲಿ 115 ರನ್ಗಳಿಸಿದೆ. ಆರ್ಸಿಬಿ ಒಳ್ಳೆಯ ತಂಡವನ್ನು ಹೊಂದಿದೆ ಮತ್ತು ತಂಡ ಬೌನ್ಸ್ ಬ್ಯಾಕ್ ಮಾಡಲಿದೆ ಎಂದು ಈಗಲೂ ನಾನು ನಂಬುತ್ತೇನೆ. ಆದರೆ ಅಗ್ರ ಮೂರು ಬ್ಯಾಟರ್ಗಳು ರನ್ಗಳಿಸದಿದ್ದರೆ, ಇದು ನಡೆಯಲು ಸಾಧ್ಯವಿಲ್ಲ. ಟಾಪ್ 3 ಅಂದರೆ ಕೊಹ್ಲಿ, ಫಾಫ್ ಮತ್ತು ಮ್ಯಾಕ್ಸ್ವೆಲ್. ಒಂದು ವೇಳೆ ಈ ಮೂವರು ರನ್ಗಳಿಸಿದ್ದಿದ್ದರೆ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸುವುದಿಲ್ಲ, ನಾನು ಬೇಕಾದ್ರೆ ಬರೆದುಕೊಡುತ್ತೇನೆ ಎಂದು ಚೋಪ್ರಾ ಹೇಳಿದ್ದಾರೆ.
ನಿನ್ನೆಯ ಪಂದ್ಯದ ಸೋಲಿನ ಬಳಿಕ ಆರ್ಸಿಬಿ ರನ್ರೇಟ್ನಲ್ಲಿ ಮತ್ತಷ್ಟು ಕುಸಿತ ಕಂಡು 5ನೇ ಸ್ಥಾನದಲ್ಲಿ ಮುಂದುವರಿದರೆ, ಗೆದ್ದ ರಾಜಸ್ಥಾನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಇದನ್ನೂ ಓದಿ:ಪಂದ್ಯ ಮುಗಿದ ಬಳಿಕ ಪರಾಗ್ ಜೊತೆ ಕೈ ಕುಲುಕಲು ನಿರಾಕರಿಸಿದ ಹರ್ಷಲ್ ಪಟೇಲ್: ವಿಡಿಯೋ ವೈರಲ್