ಅಹಮದಾಬಾದ್(ಗುಜರಾತ್): ಐಸಿಸಿ ವಿಶ್ವಕಪ್ ಕ್ರಿಕೆಟ್ 2023ರ ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಭಾನುವಾರ ನಡೆಯಲಿದೆ. ಇತ್ತಂಡಗಳೂ ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಪ್ರವೇಶಿಸಲಿವೆ. ಈ ಪಂದ್ಯಕ್ಕೂ ಮೊದಲು ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದಿಂದ ರೋಮಾಂಚಕ ಏರ್ ಶೋ ನಡೆಯಲಿದೆ ಎಂದು ವರದಿಯಾಗಿದೆ. ವಾಯುಪಡೆಯ ಯುದ್ಧ ವಿಮಾನಗಳು ಅಹಮದಾಬಾದ್‌ನ ಆಕಾಶದಲ್ಲಿ ಆಕರ್ಷಕ ಪ್ರದರ್ಶನ ನೀಡಲಿವೆ ಎಂದು ಅಧಿಕಾರಿಯೊಬ್ಬರು ಗುರುವಾರ ಈ ಮಾಹಿತಿ ನೀಡಿದ್ದಾರೆ.
ಗುಜರಾತ್‌ನ ಡಿಫೆನ್ಸ್ ಪ್ರೊ ಪ್ರಕಾರ, ಮೊಟೆರಾ ಪ್ರದೇಶದಲ್ಲಿರುವ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯ ಪ್ರಾರಂಭವಾಗುವ 10 ನಿಮಿಷಕ್ಕೂ ಮೊದಲು ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಏರ್ ಶೋ ಮೂಲಕ ಜನರನ್ನು ಪುಳಕಗೊಳಿಸಲಿದೆ. ಶುಕ್ರವಾರ ಮತ್ತು ಶನಿವಾರ ವೈಮಾನಿಕ ಪ್ರದರ್ಶನದ ತಾಲೀಮು ನಡೆಯಲಿದೆ ಎಂದು ಪಿಆರ್‌ಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೈನಲ್ ಪಂದ್ಯ ನಡೆಯುವ ದಿನದ ವಿಶೇಷತೆ: ಫೈನಲ್ ಪಂದ್ಯದ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಮುಖ್ಯ ಅತಿಥಿಯಾಗಿ ಭಾಗವಹಿಸುವ ಸಾಧ್ಯತೆ ಇದೆ. ಇನ್ನುಳಿದಂತೆ ಗಾಯಕರಾದ ದುವಾ ಲಿಪಾ, ಪ್ರೀತಮ್ ಚಕ್ರವರ್ತಿ ಮತ್ತು ಆದಿತ್ಯ ಗಾಧ್ವಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಆಟಗಾರರು, ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕುಟುಂಬ ಸದಸ್ಯರು ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ.
ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದ ಬಗ್ಗೆ..: ಸೂರ್ಯಕಿರಣ್ ಏರೋಬ್ಯಾಟಿಕ್ ತಂಡವು ಆಕಾಶದಲ್ಲಿ ಅದ್ಭುತ ಸಾಹಸಗಳಿಗೆ ಹೆಸರುವಾಸಿಯಾಗಿದೆ. ವಾಯುಪಡೆಯು ಈ ತಂಡದ ಮೂಲಕ ಯುದ್ಧವಿಮಾನದ ಪೈಲಟ್‌ಗಳಿಗೆ ಕುಶಲತೆ ಮತ್ತು ಶಸ್ತ್ರಾಸ್ತ್ರ ವಿತರಣೆಯಲ್ಲಿ ತರಬೇತಿ ನೀಡುತ್ತದೆ. ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವನ್ನು 1996ರಲ್ಲಿ ರಚಿಸಲಾಯಿತು. ಇದು IAFನ 52ನೇ ಸ್ಕ್ವಾಡ್ರನ್‌ನ ಭಾಗವಾಗಿದೆ. ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಸಾಮಾನ್ಯವಾಗಿ 9 ವಿಮಾನಗಳನ್ನು ಒಳಗೊಂಡಿರುತ್ತದೆ. ಈ ತಂಡ ದೇಶಾದ್ಯಂತ ಹಲವಾರು ಏರ್ ಶೋಗಳನ್ನು ಪ್ರದರ್ಶಿಸಿದೆ. ಇದರ ಕಾರ್ಯಕ್ಷಮತೆಯು ಲೂಪ್ ಕುಶಲತೆ, ಬ್ಯಾರೆಲ್ ರೋಲ್ ಕುಶಲತೆ ಸೇರಿದಂತೆ ಆಕಾಶದಲ್ಲಿ ವಿವಿಧ ಆಕಾರಗಳ ರಚನೆಯನ್ನು ನಿರೂಪಿಸುತ್ತದೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್: ಅಹಮದಾಬಾದ್‌ನಲ್ಲಿ ಹೋಟೆಲ್ ಕೊಠಡಿ ಬೆಲೆ ₹2 ಲಕ್ಷ, ವಿಮಾನ ದರ ಶೇ.300ರಷ್ಟು ಹೆಚ್ಚಳ!