ಅಹಮದಾಬಾದ್, ಗುಜರಾತ್: ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ಎಚ್ಚರ ವಹಿಸುವಂತೆ ಪಾಕಿಸ್ತಾನದ ಮಾಜಿ ಬೌಲರ್‌ಗಳು ತಮ್ಮ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ. ವಿಶ್ವಕಪ್ ನಿಮಿತ್ತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಇಂದು ನಡೆಯಲಿದೆ. ಮಾಜಿ ಆಟಗಾರರಾದ ವಾಸಿಂ ಅಕ್ರಮ್ ಮತ್ತು ಮಿಸ್ಬಾ - ಉಲ್ - ಹಕ್ ತಮ್ಮ ಬೌಲರ್‌ಗಳಿಗೆ ಪ್ರಮುಖ ಸೂಚನೆಗಳನ್ನು ನೀಡುವಾಗ ಆಸಕ್ತಿದಾಯಕ ಹೇಳಿಕೆಗಳನ್ನು ಪ್ರಸ್ತಾಪಿಸಿದರು.
ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ವೇಗವಾಗಿ ಮುನ್ನುಗ್ಗುತ್ತಿದ್ದಾರೆ. ಯಾವುದೇ ಅಪಾಯವಿಲ್ಲದೆ ಅದ್ಭುತ ಹೊಡೆತಗಳನ್ನು ಹೊಡೆಯುತ್ತಿರುವ ರೋಹಿತ್‌ಗೆ ಬೌಲಿಂಗ್ ಮಾಡುವಾಗ ಬೌಲರ್‌ಗಳು ಬಹಳ ಎಚ್ಚರಿಕೆಯಿಂದ ಇರಬೇಕು. ಸತತ ಎರಡು ಅರ್ಧಶತಕಗಳನ್ನು ಗಳಿಸಿದ ನಂತರ ಕೊಹ್ಲಿ ಕೂಡ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಆಟದ ಮೇಲೆ ಸಂಪೂರ್ಣ ನಿಯಂತ್ರಣದೊಂದಿಗೆ ಆಡುತ್ತಾರೆ. ಆದರೆ, ಕೊಹ್ಲಿಗಿಂತ ರೋಹಿತ್ ವಿಭಿನ್ನ ರೀತಿಯ ಬ್ಯಾಟ್ಸ್‌ಮನ್. ಇತರ ಬ್ಯಾಟ್ಸ್‌ಮನ್‌ಗಳಿಗಿಂತ ರೋಹಿತ್‌ಗೆ ಬಾಲ್ನ್ನು ಎದುರಿಸಲು ಹೆಚ್ಚಿನ ಸಮಯವಿದೆ ಎಂದು ವಾಸಿಂ ಅಕ್ರಂ ಪ್ರತಿಕ್ರಿಯಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧ ರೋಹಿತ್ ಶರ್ಮಾ ಇಷ್ಟು ದೊಡ್ಡ ಇನಿಂಗ್ಸ್ ಆಡಿದ ಬಳಿಕ ಇತರ ತಂಡಗಳು ಒತ್ತಡಕ್ಕೆ ಸಿಲುಕುವುದು ಸಹಜ. ಎಲ್ಲಿ ಬೌಲಿಂಗ್ ಮಾಡಬೇಕೆಂಬುದರ ಬಗ್ಗೆ ಅವರು ಕಠಿಣ ಅಭ್ಯಾಸ ನಡೆಸಬೇಕು ಎಂದು ಮಿಸ್ಬಾ ಉಲ್ ಹಕ್ ಹೇಳಿದರು. ಭಾರತ - ಪಾಕಿಸ್ತಾನ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ತಮ್ಮ ತಂಡಕ್ಕೆ ಯಶಸ್ಸಿನ ಅವಕಾಶವಿದೆ ಎಂದು ಆಯಾ ದೇಶಗಳ ಮಾಜಿ ಆಟಗಾರರು ಹೇಳುತ್ತಿದ್ದಾರೆ. ಭಾರತವೇ ಫೇವರಿಟ್.. ಪಾಕಿಸ್ತಾನಕ್ಕೂ ಅವಕಾಶಗಳಿವೆ ಎಂದು ಪಾಕಿಸ್ತಾನದ ಮಾಜಿ ಆಟಗಾರ ರಮೀಜ್ ರಾಜಾ ಹೇಳಿದ್ದಾರೆ.
ಭಾರತ ಮತ್ತು ಪಾಕ್ ನಡುವಿನ ಕದನ ದೊಡ್ಡದಾಗಿದೆ. ಆದರೆ, ಇಲ್ಲಿ ಭಾರತವೇ ಫೇವರಿಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೂರೂ ವಿಭಾಗಗಳಲ್ಲಿ ಭಾರತ ತಂಡ ಬಲಿಷ್ಠ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ರೋಹಿತ್ ಬಳಗ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಪಾಕಿಸ್ತಾನಕ್ಕೂ ಗೆಲ್ಲುವ ಅವಕಾಶವಿದೆ. ಶ್ರೀಲಂಕಾ ವಿರುದ್ಧ ಬೃಹತ್ ಗುರಿ ಗಳಿಸಿದ ಬಳಿಕ ಪಾಕಿಸ್ತಾನ ತಂಡದ ಆತ್ಮವಿಶ್ವಾಸವೂ ಹೆಚ್ಚಿದೆ ಎಂದು ರಮೀಜ್ ರಾಜಾ ಹೇಳಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಭಾರತ ಮತ್ತು ಪಾಕ್ ನಡುವಿನ ಪಂದ್ಯ ಶುರುವಾಗಲಿದೆ.
ಓದಿ: ಭಾರತ vs ಪಾಕಿಸ್ತಾನ ಪಂದ್ಯ: 15 ರಿಂದ 25 ಸಾವಿರ ರೂ. ನೀಡಿ ಬ್ಲ್ಯಾಕ್ ಟಿಕೆಟ್ ಖರೀದಿಸಿದ ಪ್ರೇಕ್ಷಕರು..