ಪುಣೆ(ಮಹಾರಾಷ್ಟ್ರ): ಮೊದಲ ಪಂದ್ಯದಲ್ಲಿ ಸ್ವಲ್ಪ ಕಷ್ಟವೆನಿಸಿದ್ರೂ ಆಸ್ಟ್ರೇಲಿಯಾ ತಂಡವನ್ನು ಭಾರತ ಸೋಲಿಸಿತು. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸುಲಭ ಜಯ ಸಾಧಿಸಿತ್ತು. ಆದ್ರೆ ಹೈವೋಲ್ಟೇಜ್ ಪಂದ್ಯವಾಗಿದ್ದ ಪಾಕಿಸ್ತಾನ ವಿರುದ್ಧ ನಿಜವಾದ ಸ್ಪರ್ಧೆ ಇರಲಿಲ್ಲ. ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಸ್ಗೆ ಫೇವರಿಟ್ ಎನಿಸಿಕೊಂಡಿದೆ. ಇಂದು ಬಾಂಗ್ಲಾದೇಶದೊಂದಿಗೆ ಹಣಾಹಣಿ ನಡೆಯಲಿದೆ.
ಸಾಮರ್ಥ್ಯ ಮತ್ತು ಫಾರ್ಮ್‌ನಲ್ಲಿ ರೋಹಿತ್ ತಂಡಕ್ಕೆ ಬಾಂಗ್ಲಾದೇಶ ಯಾವುದೇ ಸಾಟಿಯಲ್ಲ. ಹಾಗಂತ ಕಡೆಗಣನೆ ಸಲ್ಲದು. ಯಾಕೆಂದರೆ ಇಂಗ್ಲೆಂಡ್‌ಗೆ ಅಫ್ಘಾನಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ದಕ್ಷಿಣ ಆಫ್ರಿಕಾಕ್ಕೆ ನೀಡಿದ ಆಘಾತಗಳನ್ನು ನೋಡಿದ ನಂತರ.. ಪ್ರತಿಭೆಗಳಿಂದ ತುಂಬಿರುವ ಬಾಂಗ್ಲಾದೇಶವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. ಹೀಗಾಗಿ ಪುಣೆಯಲ್ಲಿ ಬಾಂಗ್ಲಾದಿಂದ ಬಿರುಸಿನ ಪೈಪೋಟಿ ಎದುರಾಗಬಹುದು.
ಗಿಲ್ ಮೇಲೆ ಗಮನ: ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಿದ ಆರಂಭಿಕ ಆಟಗಾರ ಶುಭ್ಮನ್ ಗಿಲ್ಗೆ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ದೊಡ್ಡ ಇನ್ನಿಂಗ್ಸ್ ಆಡಲು ಅವರಿಗೆ ಉತ್ತಮ ಅವಕಾಶವಿದೆ. ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ವಿರುದ್ಧ ಸಿಡಿದೆದ್ದಿರುವ ನಾಯಕ ರೋಹಿತ್ ಶರ್ಮಾ ಮೇಲೆ ಭಾರಿ ನಿರೀಕ್ಷೆಗಳಿವೆ. ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿ ಪಾಕಿಸ್ತಾನ ವಿರುದ್ಧ ನಿರಾಸೆ ಮೂಡಿಸಿದ್ದ ಕೊಹ್ಲಿಯಿಂದಲೂ ಅಭಿಮಾನಿಗಳು ಬೃಹತ್ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದಾರೆ. ರಾಹುಲ್ ಮತ್ತು ಶ್ರೇಯಸ್ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಟೂರ್ನಿಯಲ್ಲಿ ಹಾರ್ದಿಕ್ ಮತ್ತು ಜಡೇಜಾ ಇನ್ನೂ ಬ್ಯಾಟಿಂಗ್ ಪರೀಕ್ಷೆ ಎದುರಿಸಿಲ್ಲ. ಅನಿರೀಕ್ಷಿತವಾಗಿ ತಂಡ ಕುಸಿದುಬೀಳದ ಹೊರತು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹೆಚ್ಚು ಹೊತ್ತು ಆಡಬೇಕಿಲ್ಲ. ಬೌಲಿಂಗ್ನಲ್ಲಿ ಬುಮ್ರಾ, ಸಿರಾಜ್, ಕುಲದೀಪ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಹಾರ್ದಿಕ್ ಕೂಡ ತಮ್ಮ ವೇಗದಲ್ಲಿ ವಿಕೆಟ್ ಕಬಳಿಸುತ್ತಿದ್ದಾರೆ. ಜಡೇಜಾ ಪ್ರದರ್ಶನ ಸ್ವಲ್ಪ ಸುಧಾರಿಸಬೇಕಿದೆ.
ಇವರೊಂದಿಗೆ ಸ್ವಲ್ಲ ಎಚ್ಚರಿಕೆ: ಬಾಂಗ್ಲಾದೇಶ ಕೆಲವು ಅಪಾಯಕಾರಿ ಆಟಗಾರರನ್ನು ಹೊಂದಿದೆ. ನಾಯಕ ಶಕೀಬ್ ಅಲ್ ಹಸನ್ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಅವರು ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಆದರೆ ಶಕೀಬ್ ಸಣ್ಣ ಗಾಯದಿಂದ ಬಳಲುತ್ತಿದ್ದಾರೆ. ಮತ್ತೊಬ್ಬ ಸ್ಪಿನ್ ಆಲ್ ರೌಂಡರ್ ಮೆಹದಿ ಮಿರಾಜ್ ಉತ್ತಮ ಫಾರ್ಮ್ನಲ್ಲಿದ್ದಾರೆ. ವೇಗಿ ವಿಭಾಗದಲ್ಲೂ ಬಾಂಗ್ಲಾದಲ್ಲಿ ಮುಸ್ತಾಫಿಜುರ್, ತಸ್ಕಿನ್ ಅಹ್ಮದ್, ಶೋರಿಫುಲ್ ಅವರಂತಹ ಪ್ರತಿಭೆಗಳಿವೆ. ಭಾರತದ ವಿರುದ್ಧವೂ ಮುಸ್ತಫಿಜುರ್ ಉತ್ತಮ ದಾಖಲೆ ಹೊಂದಿದ್ದಾರೆ. ಆ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಮುಶ್ಫಿಕರ್ ರಹೀಮ್ ಪ್ರಮುಖರಾಗಿದ್ದಾರೆ. ಲಿಟ್ಟನ್ ದಾಸ್ ಮತ್ತು ನಜ್ಮುಲ್ ಸ್ಯಾಂಟೊ ಕೂಡ ಉತ್ತಮ ಬ್ಯಾಟರ್ಸ್.
ಬಾಂಗ್ಲಾದೇಶದ ಕೋಚ್ಗೆ ಭಯ: ಎಲ್ಲ ವಿಭಾಗಗಳಲ್ಲೂ ಭಾರತ ಬಲಿಷ್ಠವಾಗಿದೆ. ಸ್ಟ್ರೈಕ್ ಬೌಲರ್‌ಗಳಿದ್ದಾರೆ. ಬುಮ್ರಾ ತಮ್ಮ ಅತ್ಯುತ್ತಮ ಸ್ಥಿತಿಗೆ ಮರಳಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಅನುಭವಿ ಸ್ಪಿನ್ನರ್‌ಗಳಿದ್ದಾರೆ. ಅದರಲ್ಲೂ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಭಾರತ ಚೆನ್ನಾಗಿ ಆಡುತ್ತಿದೆ. ನಿರ್ಭೀತಿಯಿಂದ ಆಡುತ್ತಿರುವ ಭಾರತ ತಂಡ ಎದುರಾಳಿಗಳನ್ನು ಕಾಡುತ್ತಿದೆ. ತವರು ನೆಲದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಉತ್ತಮ ಬೆಂಬಲ ಸಿಗುತ್ತಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶದ ನಾಯಕ ಶಕೀಬ್ ಸಂಪೂರ್ಣ ಫಿಟ್ ಆಗಿದ್ದರೆ ಮಾತ್ರ ಆಡಲಿದ್ದಾರೆ. ಸ್ಕ್ಯಾನ್ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ. ಪಂದ್ಯಕ್ಕೂ ಮುನ್ನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇತ್ತೀಚೆಗೆ ಭಾರತದ ವಿರುದ್ಧ ನಮ್ಮ ದಾಖಲೆ ಉತ್ತಮವಾಗಿದೆ. ಆದರೆ ವಿಶ್ವಕಪ್‌ನಲ್ಲಿ ಆ ತಂಡದ ವಿರುದ್ಧ ಗೆಲ್ಲಲು ಕಠಿಣ ಪರಿಶ್ರಮ ಪಡಬೇಕು. ಬ್ಯಾಟರ್‌ಗಳು ಮಿಂಚಬೇಕು ಎಂದು ಬಾಂಗ್ಲಾದೇಶದ ಕೋಚ್ ಚಂಡಿಕಾ ಹತುರುಸಿಂಗ ಅವರು ಹೇಳಿದರು.
ಅದೇ ತಂಡವೇ?: ವಿಶ್ವಕಪ್‌ನಲ್ಲಿ ಭಾರತ ಆಡುವ ಪ್ರತಿಯೊಂದು ಪಂದ್ಯಕ್ಕೂ ಮುನ್ನ ನಡೆಯುವ ಚರ್ಚೆ ಈ ಪಂದ್ಯಕ್ಕೂ ಮುನ್ನ ನಡೆಯುತ್ತಿದೆ. ಹೆಚ್ಚಿನವರು ಬಯಸುತ್ತಿರುವ ಅಂತಿಮ ತಂಡದಲ್ಲಿ ಬದಲಾವಣೆಯಾಗಲಿದೆಯೇ ಎಂಬುದು ಕುತೂಹಲಕಾರಿಯಾಗಿದೆ. ಇನ್ನುಳಿದ 10 ಆಟಗಾರರ ಬಗ್ಗೆ ಯಾರ ಆಕ್ಷೇಪವೂ ಇಲ್ಲ. ಆದರೆ ಮೂರನೇ ವೇಗಿಯಾಗಿ ಆಡುತ್ತಿರುವ ಶಾರ್ದೂಲ್ ಠಾಕೂರ್ ತಂಡಕ್ಕೆ ಅಷ್ಟಾಗಿ ಉಪಯುಕ್ತವಾಗಿಲ್ಲ. ಅವರು ಅಫ್ಘಾನಿಸ್ತಾನ ವಿರುದ್ಧ ಒಂದು ವಿಕೆಟ್ ಪಡೆದರು. ಆದರೆ ಪಾಕಿಸ್ತಾನ ವಿರುದ್ಧ ಯಾವುದೇ ವಿಕೆಟ್ ಪಡೆಯಲಿಲ್ಲ. ಆ ಪಂದ್ಯದಲ್ಲಿ ಅವರು ಎರಡು ಓವರ್ ಬೌಲ್ ಮಾಡಿದರು. ಮೂರನೇ ವೇಗಿಯಾಗಿ ಶಮಿ ಅವರಿಗೆ ಉತ್ತಮ ಪರ್ಯಾಯ ಎಂಬ ಅಭಿಪ್ರಾಯಗಳಿವೆ. ಪಿಚ್ ಸ್ಪಿನ್‌ಗೆ ಸೂಕ್ತವಾಗಿದ್ದರೆ ಶಾರ್ದೂಲ್ ಅವರನ್ನು ಬದಿಗಿಟ್ಟು ಅಶ್ವಿನ್ ಅವರನ್ನು ಆಡಿಸಬೇಕು ಎಂಬ ಬೇಡಿಕೆಗಳು ಕೇಳಿಬರುತ್ತಿವೆ. ಆದರೆ, ಗೆಲ್ಲುವ ತಂಡವನ್ನು ಬದಲಾಯಿಸಲು ಬಯಸುವುದಿಲ್ಲ ಎಂಬ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರ ಮಾತುಗಳನ್ನು ನೋಡಿದರೆ ಶಾರ್ದೂಲ್ಗೆ ಈ ಪಂದ್ಯದಲ್ಲೂ ಅವಕಾಶ ಲಭಿಸಬಹುದಾಗಿದೆ.
ಪುಣೆಯಲ್ಲಿ ರನ್ಗಳ ಹೊಳೆ..: ಪುಣೆ ಪಿಚ್ ಯಾವಾಗಲೂ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಇಲ್ಲಿ ದೊಡ್ಡ ಸ್ಕೋರ್ಗಳನ್ನು ದಾಖಲಿಸಲಾಗಿದೆ. ಅಂತಿಮವಾಗಿ ಇಲ್ಲಿ ಆಡಿದ ಐದು ODIಗಳಲ್ಲಿ ಮೂರು ಬಾರಿ ಮೊದಲು ಬ್ಯಾಟ್ ಮಾಡಿದ ತಂಡಗಳು 300+ ರನ್ ಗಳಿಸಿವೆ. ಪಿಚ್ ಕೂಡ ಸ್ಪಿನ್ನರ್‌ಗಳಿಗೆ ನೆರವಾಗುತ್ತದೆ. ಪಂದ್ಯದ ವೇಳೆ ಸ್ವಲ್ಪ ಮಳೆಯಾಗುವ ಮುನ್ಸೂಚನೆ ಇದೆ.
ಭಾರತದ ಸಂಭಾವ್ಯ 11ರ ಬಳಗ: ರೋಹಿತ್ (ನಾಯಕ), ಶುಭಮನ್, ಕೊಹ್ಲಿ, ಶ್ರೇಯಸ್, ರಾಹುಲ್, ಹಾರ್ದಿಕ್, ಜಡೇಜಾ, ಶಾರ್ದೂಲ್/ಅಶ್ವಿನ್, ಕುಲದೀಪ್, ಬುಮ್ರಾ, ಸಿರಾಜ್.
ಬಾಂಗ್ಲಾದೇಶ ಸಂಭಾವ್ಯ 11ರ ಬಳಗ: ಲಿಟನ್ ದಾಸ್, ತಂಜಿದ್ ಹಸನ್, ನಜ್ಮುಲ್ ಸಾಂಟೊ, ಮೆಹಿದಿ ಹಸನ್ ಮಿರಾಜ್, ಶಕೀಬ್ (ನಾಯಕ), ಮುಶ್ಫಿಕರ್ ರಹೀಮ್, ಹೃದಯೋಯ್, ಮಹಮ್ಮದುಲ್ಲಾ, ತಸ್ಕಿನ್, ಶೋರಿಫುಲ್, ಮುಸ್ತಫಿಜುರ್.
ಓದಿ: ವಿಶ್ವಕಪ್‌ನಲ್ಲಿ ದೊಡ್ಡ ತಂಡ ಅಂತೇನಿಲ್ಲ; ಗಮನ ಕೇಂದ್ರೀಕರಿಸಿ ಆಡಿದರೆ ಯಾರನ್ನು ಬೇಕಾದರೂ ಮಣಿಸಬಹುದು: ಕೊಹ್ಲಿ