ಮೌಂಟ್ ಮೌಂಗನುಯಿ: ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಮೊತ್ತದ ಜಯ ಸಾಧಿಸಿದ ವಿಶ್ವಾಸಲ್ಲಿರುವ ಭಾರತ ಮಹಿಳಾ ತಂಡ ಐಸಿಸಿ ಮಹಿಳಾ ವಿಶ್ವಕಪ್ನ ತನ್ನ 4ನೇ ಪಂದ್ಯದಲ್ಲಿ ಸತತ ಮೂರು ಸೋಲು ಕಂಡು ಹತಾಷೆಯಲ್ಲಿರುವ ಇಂಗ್ಲೆಂಡ್ ವಿರುದ್ಧ ಬುಧವಾರ ಕಣಕ್ಕಿಳಿಯಲಿದೆ.
ತನ್ನ ಕೊನೆಯ ಪಂದ್ಯದಲ್ಲಿ ವಿಂಡೀಸ್ ವಿರುದ್ಧ 155 ರನ್ಗಳ ಜಯ ಸಾಧಿಸಿರುವ ಭಾರತ ಪ್ರಸ್ತುತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇದೇ ಜಯದ ಓಟವನ್ನು ಮುಂದುವರಿಸಿ ಅಂತಿಮ 4 ಸ್ಥಾನ ಕಾಯ್ದುಕೊಳ್ಳುವ ಆಲೋಚನೆಯಲ್ಲಿದೆ.
ನ್ಯೂಜಿಲ್ಯಾಂಡ್ ವಿರುದ್ಧ 162 ಡಾಟ್ ಬಾಲ್ಗಳನ್ನಾಡಿ ಅತ್ಯಂತ ಕೆಟ್ಟ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಟೀಮ್ ಇಂಡಿಯಾ ವಿಂಡೀಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿತ್ತು. ಅನುಭವಿಗಳಾದ ಸ್ಮೃತಿ ಮಂಧಾನ(119ಎಸೆತಗಳಲ್ಲಿ 123) ಮತ್ತು ಹರ್ಮನ್‌ಪ್ರೀತ್ ಕೌರ್(107 ಎಸೆತಗಳಲ್ಲಿ 109) ಶತಕ ಸಿಡಿಸಿ 300(317)ರ ಗಡಿ ದಾಟಲು ನೆರವಾಗಿದ್ದರು. ಇದು ಈ ಆವೃತ್ತಿಯ ವಿಶ್ವಕಪ್ನ ಗರಿಷ್ಠ ಮೊತ್ತವಾಗಿತ್ತು.
ಆದರೆ ಅಗ್ರ ಕ್ರಮಾಂಕಕ್ಕೆ ಬಡ್ತಿ ಪಡೆದಿರುವ ದೀಪ್ತಿ ಶರ್ಮಾ, ನಾಯಕಿ ಮಿಥಾಲಿ ಮತ್ತು ಯುವ ವಿಕೆಟ್ ಕೀಪರ್ ರಿಚಾ ಘೋಷ್ ಬ್ಯಾಟಿಂಗ್ನಲ್ಲಿ ನಿರೀಕ್ಷಿಸಿದಷ್ಟು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯುವ ಭಾರತ ತಂಡದ ಕನಸು ನನಸಾಗಲು ಆದಷ್ಟು ಬೇಗ ಇವರು ಫಾರ್ಮ್ ಕಂಡುಕೊಳ್ಳಬೇಕಿದೆ. ಅಲ್ಲದೆ ಫಾರ್ಮ್ ಕಳೆದುಕೊಂಡಿರುವ ಇಂಗ್ಲೆಂಡ್ ವಿರುದ್ಧ ಈ ಮೂವರು ಆಟಗಾರ್ತಿಯರಿಗೆ ಲಯಕ್ಕೆ ಮರಳಲು ಅದ್ಭುತ ಅವಕಾಶವಾಗಿದೆ.
ತಂಡದ ಸಕಾರಾತ್ಮಕ ಅಂಶವೆಂದರೆ ಆಲ್ರೌಂಡರ್ಗಳಾದ ಸ್ನೇಹ್ ರಾಣ ಮತ್ತು ಪೂಜಾ ವಸ್ತ್ರಾಕರ್ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜೂಲನ್ ಮತ್ತು ಮೇಘನಾ ಸಿಂಗ್ ಉತ್ತಮ ಪ್ರದರ್ಶನ ನೀಡಿದರೂ ವಿಕೆಟ್ ಪಡೆಯುವುದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಸ್ಪಿನ್ನರ್ಗಳಾದ ರಾಜೇಶ್ವರಿ ಗಾಯಕ್ವಾಡ್(7) ಮತ್ತು ಸ್ನೇಹ್ ರಾಣಾ(5) ವಿಕೆಟ್ ಪಡೆಯುವುದರ ಜೊತೆಗೆ ಎದುರಾಳಿಗಳ ರನ್ಗತಿಗೂ ಕಡಿವಾಣ ಹಾಕುವಲ್ಲಿ ಸಫಲರಾಗಿದ್ದಾರೆ.
ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ತಂಡ ಗೆಲುವಿನ ಹಳಿಗೆ ಮರಳುವುದಕ್ಕೆ ಕಾಯುತ್ತಿದೆ. ಸೋತಿರುವ ಮೂರು ಪಂದ್ಯಗಳಲ್ಲಿ 2 ಪಂದ್ಯಗಳು ಕೊನೆಯ ಓವರ್ನಲ್ಲಿ ಅಂತ್ಯಗೊಂಡಿವೆ. ಹಾಗಾಗಿ ತಮ್ಮ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಕಮ್ಬ್ಯಾಕ್ ಮಾಡುವುದಕ್ಕೆ ಎದುರು ನೋಡುತ್ತಿದೆ.
ಭಾರತ: ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್, ಯಸ್ತಿಕಾ ಭಾಟಿಯಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಿಚಾ ಘೋಷ್ (ವಿಕೆಟ್ ಕೀಪರ್), ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ಜೂಲನ್ ಗೋಸ್ವಾಮಿ, ರೇಣುಕಾ ಸಿಂಗ್.
ಇಂಗ್ಲೆಂಡ್: ಹೀದರ್ ನೈಟ್ (ನಾಯಕಿ), ಟಮ್ಮಿ ಬ್ಯೂಮಾಂಟ್, ಕ್ಯಾಥರೀನ್ ಬ್ರಂಟ್, ಫ್ರೇಯಾ ಡೇವಿಸ್, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಕೇಟ್ ಕ್ರಾಸ್, ಸೋಫಿ ಎಕ್ಲೆಸ್ಟೋನ್, ಟ್ಯಾಶ್ ಫಾರಂಟ್, ಆ್ಯಮಿ ಜೋನ್ಸ್, ಎಮ್ಮಾ ಲ್ಯಾಂಬ್, ನ್ಯಾಟ್ ಸೀವರ್, ಅನ್ಯಾ ಶ್ರಬ್ಸೋಲ್, ಲಾರೆನ್ ವಿನ್ಫೀಲ್ಡ್-ಹಿಲ್, ಡ್ಯಾನಿ ವ್ಯಾಟ್