ವೆಲ್ಲಿಂಗ್ಟನ್(ನ್ಯೂಜಿಲ್ಯಾಂಡ್): ನ್ಯೂಜಿಲ್ಯಾಂಡ್ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಇದೀಗ ರೋಚಕ ಘಟ್ಟ ತಲುಪಿದೆ. ಇಂದಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಿದೆ. ಹೀಗಾಗಿ, ಸೆಮಿಫೈನಲ್ಗೆ ಭಾರತ ಪ್ರವೇಶ ಪಡೆದುಕೊಳ್ಳಬೇಕಾದರೆ ಮುಂದಿನ ಪಂದ್ಯದಲ್ಲಿ ಜಯ ಸಾಧಿಸಲೇಬೇಕಿದೆ.
ಪಾಕಿಸ್ತಾನ ವಿರುದ್ಧ 9 ವಿಕೆಟ್ಗಳ ಸುಲಭ ಜಯ ಸಾಧಿಸುವ ಮೂಲಕ ಇಂಗ್ಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಭಾರತ ಐದನೇ ಸ್ಥಾನಕ್ಕೆ ಕುಸಿದಿದೆ. ಮತ್ತೊಂದು ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಪಂದ್ಯ ಮಳೆಯಿಂದಾಗಿ ರದ್ಧುಗೊಂಡಿದೆ. ಉಭಯ ತಂಡಗಳಿಗೆ ತಲಾ 1 ಅಂಕ ನೀಡಲಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಈಗಾಗಲೇ ಸಮಿಫೈನಲ್ ಸ್ಥಾನ ಖಾತ್ರಿಪಡಿಸಿಕೊಂಡಿದೆ. ಆದರೆ, ವೆಸ್ಟ್ ಇಂಡೀಸ್ ತಂಡ ಆಡಿರುವ ಎಲ್ಲ ಪಂದ್ಯಗಳಿಂದ 7 ಅಂಕಗಳಿಕೆ ಮಾಡಿದ್ದು, ಸೆಮೀಸ್ ಸ್ಥಾನ ಇತರೆ ತಂಡಗಳ ಪಂದ್ಯಗಳ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.
ಇದನ್ನೂ ಓದಿ: ಸಿಎಸ್ಕೆ ನಾಯಕತ್ವ ಬಿಟ್ಟುಕೊಟ್ಟ ಧೋನಿಗೆ ಅಭಿಮಾನಿಗಳ 'ಸೆಲ್ಯೂಟ್'!
ಸೆಮಿಫೈನಲ್ ಲೆಕ್ಕಾಚಾರ: ಟೂರ್ನಿಯಲ್ಲಿ ಭಾಗಿಯಾಗಿದ್ದ ನ್ಯೂಜಿಲ್ಯಾಂಡ್, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಈಗಾಗಲೇ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿವೆ. ಆದರೆ, ತಾನು ಆಡಿರುವ ಎಲ್ಲ ಪಂದ್ಯಗಳಲ್ಲೂ ಗೆಲುವು ದಾಖಲು ಮಾಡಿರುವ ಆಸ್ಟ್ರೇಲಿಯಾ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದೆ. ಉಳಿದಂತೆ 9 ಪಾಯಿಂಟ್ ಗಳಿಕೆ ಮಾಡಿರುವ ಆಫ್ರಿಕಾ ಕೂಡ ಎರಡನೇ ತಂಡವಾಗಿ ನಾಲ್ಕರ ಘಟ್ಟ ಪ್ರವೇಶಿಸಿದೆ.
ಮೂರು-ನಾಲ್ಕನೇ ಸ್ಥಾನಕ್ಕೆ ಫೈಟ್: ನಾಲ್ಕರ ಸ್ಥಾನಕ್ಕಾಗಿ ಇದೀಗ ವೆಸ್ಟ್ ಇಂಡೀಸ್, ಭಾರತ ಮತ್ತು ಇಂಗ್ಲೆಂಡ್ ನಡುವೆ ಫೈಟ್ ಏರ್ಪಟ್ಟಿದೆ. ಈ ತಂಡಗಳು ಕ್ರಮವಾಗಿ 3,4 ಮತ್ತು 5ನೇ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್ ಈಗಾಗಲೇ ಎಲ್ಲ ಪಂದ್ಯಗಳನ್ನಾಡಿ 7 ಅಂಕ ಗಳಿಸಿದೆ. ಆದರೆ, ಭಾರತ ಮತ್ತು ಇಂಗ್ಲೆಂಡ್ಗೆ ಇನ್ನೂ ಒಂದು ಪಂದ್ಯ ಬಾಕಿ ಉಳಿದಿದ್ದು, ಇಲ್ಲಿ ಗೆಲುವು ಅನಿವಾರ್ಯ.
ಭಾರತಕ್ಕೆ ಬಲಿಷ್ಠ ಆಫ್ರಿಕಾ ಸವಾಲು: ನಾಲ್ಕರ ಹಂತಕ್ಕೆ ಭಾರತ ಮಹಿಳಾ ತಂಡ ಲಗ್ಗೆ ಹಾಕಲು ಮುಂದಿನ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಬೇಕಿದೆ. ದ.ಆಫ್ರಿಕಾ ಈಗಾಗಲೇ ತಾನಾಡಿರುವ 6 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಪಡೆದಿದ್ದು, ಟೀಂ ಇಂಡಿಯಾಗೆ ಕಠಿಣ ಸವಾಲು ನೀಡುವ ಸಾಧ್ಯತೆ ಇದೆ.