ಕ್ಯಾನ್‌ಬೆರಾ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ಗೆ ಕೊರೊನಾ ವಿನಾಯ್ತಿ ನೀಡಲಾಗಿದೆ. ಆಟಗಾರರಿಗೆ ಸೋಂಕು ಕಾಣಿಸಿಕೊಂಡರೂ, ದೈಹಿಕವಾಗಿ ಸದೃಢರಾಗಿದ್ದರೆ ಪಂದ್ಯಗಳಲ್ಲಿ ಆಡಲು ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಐಸಿಸಿ) ಅನುಮತಿ ನೀಡಿದೆ.
ತಂಡದ ಯಾವುದೇ ಸದಸ್ಯರಿಗೆ ಕೊರೊನಾ ಸೋಂಕು ದೃಢಪಟ್ಟಲ್ಲಿ ಅವರು ದೈಹಿಕವಾಗಿ ಸಕ್ಷಮವಾಗಿದ್ದರೆ, ಕ್ವಾರಂಟೈನ್ ಮಾಡುವ ಅಗತ್ಯವಿಲ್ಲ. ಅವರು ಪಂದ್ಯಗಳಲ್ಲಿ ಭಾಗವಹಿಸಬಹುದು. ವೈದ್ಯರ ಸಲಹೆ ಇದಕ್ಕೆ ಅಗತ್ಯವಾಗಿರುತ್ತದೆ. ಫಿಟ್ ಆಗಿದ್ದಲ್ಲಿ ಆಟದಲ್ಲಿ ಮುಂದುವರಿಯಬಹುದು ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು. ಬಯೋಬಬಲ್ ವ್ಯವಸ್ಥೆಯಲ್ಲಿ ಕ್ರಿಕೆಟ್ ಆಡಿಸಲಾಗುತ್ತಿತ್ತು. ಯಾವುದೇ ಪ್ರೇಕ್ಷಕರಿಗೆ ಕ್ರೀಡಾಂಗಣದಲ್ಲಿ ಅವಕಾಶವಿರಲಿಲ್ಲ. ಸೋಂಕು ಲಕ್ಷಣ ಕಾಣಿಸಿಕೊಂಡರೂ ಅಂತಹ ಆಟಗಾರರನ್ನು 10 ದಿನ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತಿತ್ತು. ಐಪಿಎಲ್ ವೇಳೆ ತಂಡದಲ್ಲಿ ಕೊರೊನಾ ಕಾಣಿಸಿಕೊಂಡಿದ್ದಕ್ಕೆ ಟೂರ್ನಿಯನ್ನೇ ಅರ್ಧಕ್ಕೆ ಸ್ಥಗಿತಗೊಳಿಸಿ ಬಳಿಕ ಮತ್ತೆ ನಡೆಸಲಾಗಿತ್ತು.
ಲಸಿಕೆ ಹಾಕಿಸಿಕೊಂಡಿಲ್ಲ ಎಂಬ ಕಾರಣಕ್ಕಾಗಿ ಆಸ್ಟ್ರೇಲಿಯಾ ಸರ್ಕಾರ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ಗೆ ಆಸ್ಟ್ರೇಲಿಯಾ ಓಪನ್ನಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಿತ್ತು. ಬಳಿಕ ಈ ನಿಯಮ ಸಡಿಲಿಸಿಕೊಂಡ ಸರ್ಕಾರ ಬಳಿಕ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸೋಂಕು ಪತ್ತೆಯಾದರೂ ಕ್ರೀಡಾಕೂಟದಲ್ಲಿ ಮುಂದುವರಿಯಲು ಅವಕಾಶ ನೀಡಿತ್ತು.