ಶಾರ್ಜಾ: ಸಂಘಟಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ತಂಡವನ್ನು 142 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಸೆಮಿಫೈನಲ್ ಪ್ರವೇಶಿಸಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ಗಳಲ್ಲಿ ತನ್ನಲ್ಲೇ ವಿಕೆಟ್ ಕಳೆದುಕೊಂಡು ಹರಿಣ ಪಡೆಗೆ 143 ರನ್ಗಳ ಸಾಧಾರಣ ಟಾರ್ಗೆಟ್ ನೀಡಿದೆ.
ಆರಂಭಿಕ ಬ್ಯಾಟರ್ ಪತುಮ್ ನಿಸಾಂಕ 58 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 72 ರನ್ ಗಳಿಸಿದರೆ ತಂಡದ ಗರಿಷ್ಠ ಸ್ಕೋರರ್ ಆದರು. ಇವರನ್ನು ಬಿಟ್ಟರೆ ಅಸಲಂಕಾ 21 ರನ್ಗಳಿಸಿದರು. ಆದರೆ ಹರಿಣಗಳ ಬೌಲಿಂಗ್ ದಾಳಿಗೆ ತತ್ತರಿಸಿದ ಲಂಕಾದ ಉಳಿದ ಬ್ಯಾಟರ್ಗಳು 20ರ ಗಡಿ ದಾಟುವಲ್ಲಿ ವಿಫಲರಾದರು.
ವೈಫಲ್ಯ ಅನುಭವಿಸಿದ ಆರಂಭಿಕ ಕುಸಾಲ್ ಪೆರೆರಾ 7 ರನ್ಗಳಿಸಿದರೆ, ಯುವ ಬ್ಯಾಟರ್ಗಳಾದ ಭಾನುಕ ರಾಜಪಕ್ಷೆ(0), ಅವಿಷ್ಕಾ ಫರ್ನಾಂಡೋ (3) ರನ್ಗಳಿಗೆ ವಿಕೆಟ್ ಒಪ್ಪಿಸಿ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದರು. ಆಲ್ರೌಂಡರ್ಗಳಾದ ವನಿಂಡು ಹಸರಂಗ(4) ದಸುನ್ ಶನಕ (11) ಮತ್ತು ಚಮಿಕಾ ಕರುಣರತ್ನೆ (5) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಬಾಲಂಗೋಚಿಗಳಾದ ಚಮೀರಾ 3, ಮಹೀಶ ತೀಕ್ಷಾನ ಅಜೇಯ 7 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ದಕ್ಷಿಣ ಆಫ್ರಿಕಾ ಪರ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ವಿಶ್ವದ ನಂಬರ್ 1 ಸ್ಪಿನ್ನರ್ ತಬ್ರೈಜ್ ಶಮ್ಸಿ 17ಕ್ಕೆ3 ವೇಗಿಗಳಾದ ಡ್ವೇನ್ ಪ್ರಿಟೋರಿಯಸ್ 17ಕ್ಕೆ 3 ಮತ್ತು ಹೆನ್ರಿಚ್ ನಾರ್ಕಿಯಾ 27ಕ್ಕೆ 2 ವಕೆಟ್ ಪಡೆದು ಮಿಂಚಿದರು.
ಇದನ್ನು ಓದಿ:T20 ವಿಶ್ವಕಪ್: ಶಾರ್ದೂಲ್ಗಿಲ್ಲ ಚಾನ್ಸ್; ಬದಲಾವಣೆ ಇಲ್ಲದೆ ಕಿವೀಸ್ ವಿರುದ್ಧ ಕೊಹ್ಲಿ ಪಡೆ ಕಣಕ್ಕೆ?