ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾರತ ನಾಳೆ (ಬುಧವಾರ) ವಿಶ್ವಕಪ್ನ ಲೀಗ್ ಹಂತದ ಎರಡನೇ ಪಂದ್ಯವನ್ನು ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ. ಟೀಂ ಇಂಡಿಯಾ ಮೊದಲ ಪಂದ್ಯವನ್ನು ರೋಚಕತೆಯಿಂದ ಗೆದ್ದಿದ್ದರೂ ಉತ್ತಮ ರನ್ರೇಟ್ ಗಳಿಸುವಲ್ಲಿ ವಿಫಲವಾಗಿತ್ತು. ಹೀಗಾಗಿ ಅಫ್ಘಾನಿಸ್ತಾನ ಮೇಲೆ ಭಾರತ ದೊಡ್ಡ ಗೆಲುವು ದಾಖಲಿಸುವ ಅಗತ್ಯವಿದೆ.
ನಾಯಕ ರೋಹಿತ್ ಶರ್ಮಾ ಲೀಗ್ ಹಂತದ ಅವಧಿಯಲ್ಲಿ ತಂಡಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಒಂಬತ್ತು ವಿಭಿನ್ನ ಸ್ಥಳಗಳಲ್ಲಿನ ಪರಿಸ್ಥಿತಿಗಳಿಗೆ ತ್ವರಿತವಾಗಿ ಹೊಂದಿಕೊಳ್ಳಬೇಕಿದೆ ಎಂದಿದ್ದರು. ಅದರಂತೆ ಎರಡು ದಿನದ ಬಿಡುವಿನಲ್ಲಿ ತಂಡ ದಕ್ಷಿಣದ ತುದಿಯಿಂದ ಉತ್ತರಕ್ಕೆ ಪ್ರಯಾಣ ಬೆಳೆಸಿದ್ದು, ಅರುಣ್ ಜೇಟ್ಲಿ ಮೈದಾನದಲ್ಲಿ ವಿಭಿನ್ನ ಹವಾಮಾನದ ಜೊತೆಗೆ ಪಿಚ್ಗೆ ಹೊಂದಿಕೊಳ್ಳುವ ಅಗತ್ಯವಿದೆ. ಚೆನ್ನೈನ ಸ್ಪಿನ್ ಪಿಚ್ನಿಂದ ಫಿರೋಜ್ ಷಾ ಕೋಟ್ಲಾದ ವಿಕೆಟ್ಗೆ ಸೆಟ್ ಆಗಬೇಕಿದೆ. ಇಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯವು 700ಕ್ಕೂ ಹೆಚ್ಚು ರನ್ ಕಂಡಿತ್ತು. ಹೀಗಾಗಿ ಬ್ಯಾಟರ್ಗಳು ಅಬ್ಬರಿಸುವ ಸಾಧ್ಯತೆ ಇದೆ.
ಗಿಲ್ ಅಲಭ್ಯ: ಡೆಂಗ್ಯೂ ಕಾರಣದಿಂದಾಗಿ ಶುಭ್‌ಮನ್ ಗಿಲ್ ಆಟದಿಂದ ಹೊರಗುಳಿದಿದ್ದಾರೆ. ಅವರು ಚೆನ್ನೈನಿಂದ ತಂಡದ ಜೊತೆಗೆ ದೆಹಲಿಗೆ ಪ್ರಯಾಣ ಬೆಳೆಸಿಲ್ಲ. ಹೀಗಾಗಿ ಆಸ್ಟ್ರೇಲಿಯಾದ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ ರೋಹಿತ್ ಮೈದಾನಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸೊನ್ನೆ ಸುತ್ತಿದ ಕಿಶನ್ಗೆ ಇದು ಮತ್ತೊಂದು ಅವಕಾಶವಾಗಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆಗೆ ಗಿಲ್ ಚೇತರಿಸಿಕೊಂಡಲ್ಲಿ ಕಿಶನ್ ಬೆಂಚ್ ಕಾಯಬೇಕಾಗುತ್ತದೆ. ಆಸ್ಟ್ರೇಲಿಯಾದ ರೀತಿಯ ಕಠಿಣ ವೇಗದ ದಾಳಿ ಅಫ್ಘಾನ್ ತಂಡದಲ್ಲಿ ಇಲ್ಲದ ಕಾರಣ ಕಿಶನ್ಗೆ ಬ್ಯಾಟಿಂಗ್ ಸುಲಭ ಆಗಬಹುದು.
ವಿರಾಟ್ಗೆ ತವರು ಮೈದಾನ: ಟೀಂ ಇಂಡಿಯಾದಲ್ಲಿ ಗೋಲ್ಡನ್ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿಗೆ ದೆಹಲಿಯ ಫೀಲ್ಡ್ ತವರು ಮೈದಾನ. ಇಲ್ಲಿನ ಕ್ರೀಡಾಂಗಣದ ಮೂಲೆ ಮೂಲೆಯನ್ನೂ ಅರಿತಿರುವ ಅವರು ಅಫ್ಘಾನ್ ವಿರುದ್ಧ ಅಬ್ಬರಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಪ್ರೇಕ್ಷಕರು ನವೀನ್ ಉಲ್ ಹಕ್ ವಿರುದ್ಧ ಹೇಗೆ ಆಡುತ್ತಾರೆ ಎಂಬುದನ್ನು ನೋಡಲು ಕಾತರದಿಂದ ಇದ್ದಾರೆ. ಆಸ್ಟ್ರೇಲಿಯಾ ವಿರುದ್ಧ 85 ರನ್ ಗಳಿಸಿದ ವಿರಾಟ್ ನಾಳೆ ದೆಹಲಿಯಲ್ಲಿ ತಮ್ಮ 48ನೇ ಶತಕ ಗಳಿಸುತ್ತಾರಾ? ಎಂದು ಅಭಿಮಾನಿಗಳು ಲೆಕ್ಕಹಾಕುತ್ತಿದ್ದಾರೆ.
ರಾಹುಲ್ ಕಮ್ಬ್ಯಾಕ್ ಬಲ: ಕಳಪೆ ಫಾರ್ಮ್ನಿಂದ ಉಪನಾಯಕನ ಹುದ್ದೆ ಕಳೆದುಕೊಂಡು ತಂಡದಿಂದ ಹೊರ ಕುಳಿತಿದ್ದ ರಾಹುಲ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ನಂತರ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಆಸಿಸ್ ವಿರುದ್ಧ 97 ರನ್ ಅಲ್ಲದೇ ವಿಶ್ವಕಪ್‌ಗೂ ಮುನ್ನ ನಡೆದ ಆಸ್ಟ್ರೇಲಿಯಾದ ಏಕದಿನ ಸರಣಿ ಮತ್ತು ಏಷ್ಯಾಕಪ್ನಲ್ಲಿ ಬೆಸ್ಟ್ ಫಾರ್ಮ್ ತೋರಿದ್ದರು.
ನಿಯಂತ್ರಿತ ಬೌಲಿಂಗ್ ದಾಳಿ: ಆಸ್ಟ್ರೇಲಿಯಾವನ್ನು 199 ರನ್ಗಳಿಗೆ ಭಾರತ ನಿಯಂತ್ರಿಸಿತ್ತು. ಹೀಗೆ ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಬಲ್ಲ ಬೌಲಿಂಗ್ ಸಾಮರ್ಥ್ಯ ತಂಡದಲ್ಲಿದೆ. ಸಿರಾಜ್, ಬುಮ್ರಾ ವೇಗದಲ್ಲಿ ಮಿಂಚುತ್ತಿದ್ದರೆ, ಅಶ್ವಿನ್, ಜಡೇಜ ಅನುಭವ ಮತ್ತು ಕುಲ್ದೀಪ್ ಸ್ಪಿನ್ ಮೈದಾನದಲ್ಲಿ ಕೆಲಸ ಮಾಡುತ್ತಿದೆ. ಭಾರತದ ಪಿಚ್ಗೆ ಹೊಂದಿಕೊಂಡಂತೆ ಐವರು ಬೌಲರ್ಗಳು ಉತ್ತಮ ನಿರ್ವಹಣೆ ಮಾಡುತ್ತಾರೆ.
ಬದಲಾವಣೆ ನಿರೀಕ್ಷೆ: ಪಿಚ್ಗೆ ತಕ್ಕೆಂತೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ ಎಂದು ವಿಶ್ವಕಪ್‌ಗೂ ಮುನ್ನ ರೋಹಿತ್ ಶರ್ಮಾ ಹೇಳಿಕೊಂಡಿದ್ದರು. ಹೀಗಾಗಿ ನಾಳೆ ಅಶ್ವಿನ್ ಅವರನ್ನು ಕೈಬಿಟ್ಟು, ಶಾರ್ದೂಲ್ ಠಾಕೂರ್ಗೆ ಅವಕಾಶ ಕೊಡುವ ಸಾಧ್ಯತೆಯೂ ಇದೆ. ಉಳಿದಂತೆ ಬ್ಯಾಟಿಂಗ್ನಲ್ಲಿ ಯಾವ ಬದಲಾವಣೆಯೂ ಸಾಧ್ಯವಿಲ್ಲ.
ಅಫ್ಘಾನ್ ತಂಡವನ್ನು ಕಡೆಗಣಿಸುವಂತಿಲ್ಲ: ಅಫ್ಘಾನಿಸ್ತಾನ ತಂಡವನ್ನು ಕಡೆಗಣಿಸುವಂತಿಲ್ಲ. ಬಾಂಗ್ಲಾದೇಶದ ವಿರುದ್ಧ ಭಾರಿ ಸೋಲಿನಿಂದ ಬಂದಿರುವ ಅಫ್ಘಾನಿಸ್ತಾನವು ದೆಹಲಿಯಲ್ಲಿ ಪರಿಣಾಮಕಾರಿ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ. ಅಫ್ಘಾನ್ ಸಹ ಸ್ಪಿನ್ ಬೌಲಿಂಗ್ ನೆಚ್ಚಿಕೊಂಡಿದೆ. ಮುಜೀಬ್, ಜದ್ರಾನ್, ರಶೀದ್ ಖಾನ್ ಮತ್ತು ನವೀನ್ ಉಲ್ ಹಕ್ ಎದುರಾಳಿಗಳನ್ನು ಕಾಡುವ ತ್ರಿವಳಿ ಸ್ಪಿನ್ನರ್ಗಳು. ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಫಾರ್ಮ್‌ನಲ್ಲಿದ್ದಾರೆ.
ಸಂಭಾವ್ಯ ಆಟಗಾರರ ಪಟ್ಟಿ- ಭಾರತ: ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ
ಪಂದ್ಯ: ದೆಹಲಿಯ ಅರುಣ್ ಜೇಟ್ಲಿ ಮೈದಾನ. ಮಧ್ಯಾಹ್ನ 2ಕ್ಕೆ ಪಂದ್ಯಾರಂಭ. ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ಸ್ಟಾರ್ನಲ್ಲಿ ನೇರ ಪ್ರಸಾರ.
ಇದನ್ನೂ ಓದಿ: 1975ರ ಜಿಆರ್ವಿ ಇನ್ನಿಂಗ್ಸ್ ನೆನಪಿಸಿದ ಕೆ.ಎಲ್.ರಾಹುಲ್ ಆಟ; 48 ವರ್ಷದ ಹಿಂದಿನ ಇತಿಹಾಸ