ಲಂಡನ್ : ಭಾರತ ತಂಡ ಲಾರ್ಡ್ಸ್ನಲ್ಲಿ ಅತಿಥೇಯ ಆಂಗ್ಲರನ್ನು 151 ರನ್ಗಳಿಂದ ಮಣಿಸಿ ಸರಣಿಯನ್ನು 1-0ಯಲ್ಲಿ ಮುನ್ನಡೆ ಪಡೆದುಕೊಂಡಿದೆ. ಇದೀಗ ಎಲ್ಲರ ಕಣ್ಣು 3ನೇ ಟೆಸ್ಟ್ನತ್ತ ತಿರುಗಿದ್ದು, ತಂಡದ ಸಂಯೋಜನೆ ಬಗ್ಗೆ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ನಾಟಿಂಗ್ಹ್ಯಾಮ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಮಳೆಯ ಕಾರಣ ಡ್ರಾನಲ್ಲಿ ಅಂತ್ಯಗೊಂಡಿತ್ತು. 2ನೇ ಟೆಸ್ಟ್ನಲ್ಲಿ ಭಾರತೀಯ ವೇಗಿಗಳ ನೆರವಿನಿಂದ ಆಂಗ್ಲರನ್ನು 2ನೇ ಇನ್ನಿಂಗ್ಸ್ನಲ್ಲಿ ಕೇವಲ 120 ರನ್ಗಳಿಗೆ ಆಲೌಟ್ ಮಾಡಿ 151 ರನ್ಗಳಿಂದ ಜಯ ಸಾಧಿಸಿತ್ತು.
ಟೀಂ ಮ್ಯಾನೇಜ್ಮೆಂಟ್ ಅದ್ಭುತವಾಗಿ ಸಾಗುತ್ತಿರುವ ಈ ತಂಡವನ್ನು 3ನೇ ಟೆಸ್ಟ್ನಲ್ಲಿ ಬದಲಾಯಿಸುವ ಸಾಧ್ಯತೆ ಇಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ. ಆದರೆ, ಫಾರೂಕ್ ಇಂಜಿನಿಯರ್ ಮಾತ್ರ 3ನೇ ಟೆಸ್ಟ್ನಲ್ಲಿ ಪೂಜಾರ ಅಥವಾ ರಹಾನೆ ಜಾಗದಲ್ಲಿ ಸೂರ್ಯಕುಮಾರ್ ಯಾದವ್ರನ್ನು ಕಾಣಲು ಬಯಸುತ್ತೇನೆ ಎಂದಿದ್ದಾರೆ.
ಶುಬ್ಮನ್ ಗಿಲ್,ಆವೇಶ್ ಖಾನ್ ಮತ್ತು ವಾಷಿಂಗ್ಟನ್ ಸುಂದರ್ ಗಾಯದ ಕಾರಣ ಪ್ರವಾಸದಿಂದ ಹೊರಬಿದ್ದ ಮೇಲೆ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಬದಲಿ ಆಟಗಾರರಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಈಗಾಗಲೇ ಸೀಮಿತ ಓವರ್ಗಳಲ್ಲಿ ತಮ್ಮ ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿಸಿರುವ ಸೂರ್ಯಕುಮಾರ್ ಯಾದವ್ 3ನೇ ಟೆಸ್ಟ್ಗೆ ಮೌಲ್ಯಯುತ ಆಟಗಾರನಾಗಲಿದ್ದಾರೆ ಎಂದು ಫಾರೂಕ್ ತಿಳಿಸಿದ್ದಾರೆ.
"ಮೊದಲಿಗೆ, ನಾನು ಸೂರ್ಯಕುಮಾರ್ ಯಾದವ್ಗೆ ಬಹುದೊಡ್ಡ ಅಭಿಮಾನಿ. ಅವರೊಬ್ಬ ಕ್ಲಾಸ್ ಪ್ಲೇಯರ್. ಖಂಡಿತವಾಗಿ ನಾನು ಅವರನ್ನು ಪೂಜಾರ ಅಥವಾ ರಹಾನೆ ಜಾಗಕ್ಕೆ ಶಿಫಾರಸು ಮಾಡುತ್ತೇನೆ. ಅವರಿಬ್ಬರೂ ಕೂಡ ಅತ್ಯುತ್ತಮ ಆಟಗಾರರೇ.. ಆದರೆ, ಸೂರ್ಯಕುಮಾರ್ ಯಾದವ್ ಒಬ್ಬ ಮ್ಯಾಚ್ ವಿನ್ನರ್. ಶ್ರೇಯಸ್ ಅಯ್ಯರ್ ಗಾಯದ ಕಾರಣ ತಂಡದಿಂದ ಹೊರ ಬಿದ್ದಿದ್ದಾರೆ. ಹಾಗಾಗಿ, ಸೂರ್ಯಕುಮಾರ್ ಖಂಡಿತವಾಗಿ ತಂಡದಲ್ಲಿರಬೇಕು.
ಆತ ಆಕ್ರಮಣಕಾರಿ ಆಟಗಾರ. ಆತ ವೇಗವಾಗಿ ತಂಡಕ್ಕಾಗಿ ಶತಕ ಬಾರಿಸಬಲ್ಲ, ಜೊತೆಗೆ ವೇಗವಾಗಿ 70-80 ರನ್ಗಳಿಸುವ ಸಾಮರ್ಥ್ಯವಿದೆ. ಜೊತೆಗೆ ಆತ ಅದ್ಭುತವಾದ ಬ್ಯಾಟ್ಸ್‌ಮನ್, ಒಳ್ಳೆಯ ಫೀಲ್ಡರ್ ಮತ್ತು ಅತ್ಯುತ್ತಮ ವ್ಯಕ್ತಿ ಕೂಡ ಎಂದು ಫಾರೂಕ್ ಇಂಜಿನಿಯರ್ ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ತಮ್ಮ ಸೀಮಿತ ಓವರ್ಗಳ ಅಂತಾರಾಷ್ಟ್ರೀಯ ವೃತ್ತಿ ಜೀವನವನ್ನು ಅದ್ಭುತವಾಗಿ ಆರಂಭಿಸಿದ್ದಾರೆ. 3 ಏಕದಿನ ಪಂದ್ಯಗಳಿಂದ 124 ರನ್ ಮತ್ತು 4 ಟಿ20 ಪಂದ್ಯಗಳಿಂದ 139 ಟಿ20 ರನ್ ಬಾರಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಕೂಡ ಸೇರಿವೆ.
ಇದನ್ನು ಓದಿ: ಆರ್ಸಿಬಿ ಸೇರಿದ ಟಿಮ್ ಡೇವಿಡ್.. ಐಪಿಎಲ್ನಲ್ಲಿ ಆಡಲಿರುವ ಸಿಂಗಾಪುರ್ನ ಮೊದಲ ಕ್ರಿಕೆಟಿಗ..