ಅಹ್ಮದಾಬಾದ್: ಭಾರತ ತಂಡದ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಂಡಕ್ಕೆ ಅವಶ್ಯಕತೆಯಿದ್ದು, ಮ್ಯಾನೇಜ್ಮೆಂಟ್ ಬಯಸಿದರೆ ನಾನು ಬೌಲಿಂಗ್ ಮಾಡುವುದಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸೂರ್ಯ ನಾನು ಬೌಲಿಂಗ್ನಲ್ಲೂ ತಂಡಕ್ಕೆ ಕೊಡುಗೆ ನೀಡಬಲ್ಲೆ, ಯಾವಾಗ ಅವಕಾಶ ಸಿಕ್ಕರೂ ನಾನು ಬೌಲಿಂಗ್ ಮಾಡುತ್ತೇನೆ. ನಾನು ನಿಯಮಿತವಾಗಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದೇನೆ. ಹಾಗಾಗಿ ಮ್ಯಾನೇಜ್ಮೆಂಟ್ ಯಾವಾಗ ಬಯಸಿದರೂ ನನ್ನನ್ನು ಬೌಲರ್ ಆಗಿ ಬಳಸಿಕೊಳ್ಳಬಹುದು ಎಂದು ಮುಂಬೈ ಬ್ಯಾಟರ್ ತಿಳಿಸಿದ್ದಾರೆ.
ಹೋಲಿಕೆ ಇಷ್ಟಪಡಲ್ಲ: ಮೈಕಲ್ ಬೆವೆನ್ ಅವರೊಂದಿಗೆ ಹೋಲಿಕೆ ಮಾಡುವುದರ ಬಗ್ಗೆ ಅಭಿಪ್ರಾಯ ಕೇಳಿದಾಗ, ನಾನು ಹೋಲಿಕೆ ಮಾಡುವುದನ್ನು ಇಷ್ಟಪಡುವುದಿಲ್ಲ. ನಾನು ಕಷ್ಟಪಟ್ಟು ಸೂರ್ಯಕುಮಾರ್ ಯಾದವ್ ಆಗಿರುವುದಕ್ಕೆ ಇಷ್ಟಪಡುತ್ತೇನೆ. ಭಾರತಕ್ಕಾಗಿ 5-7 ಪಂದ್ಯಗಳನ್ನು ಆಡಿದ್ದೇನೆ. ನಾನು ಯಾವುದೇ ಕ್ರಮಾಂಕದಲ್ಲಿ ಅವಕಾಶ ನೀಡಿದರೂ ಬ್ಯಾಟಿಂಗ್ ಮಾಡುತ್ತೇನೆ ಮತ್ತು ತಂಡವನ್ನು ಗೆಲ್ಲಿಸಲು ಪ್ರಯತ್ನಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ಸರಣಿಯ ಬಗ್ಗೆ ಮಾತನಾಡಿ, ನಾವು ಮೊದಲ ಪಂದ್ಯದಲ್ಲಿ ಆಡಿದ ಉದ್ಧೇಶದಲ್ಲೇ ಉಳಿದ ಪಂದ್ಯಗಳಲ್ಲೂ ಮುಂದುವರಿಸಿಕೊಂಡು ಹೋಗಲು ಬಯಸುತ್ತೇವೆ ಎಂದು ಕೇವಲ 28 ಓವರ್ಗಳಲ್ಲಿ ಪಂದ್ಯ ಮುಗಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡುವುದು ಭಾರತಕ್ಕೆ ಸವಾಲಾಗಲಿದೆಯಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಮುಂಬೈಕರ್, ನಿಜವಾಗಿಯೂ ಇಲ್ಲ, ನಾವು ವಿಷಯಗಳನ್ನು ಸರಳವಾಗಿ ಇರಿಸಿಕೊಂಡಿದ್ದೇವೆ ಮತ್ತು ಕಳೆದ ಪಂದ್ಯದಲ್ಲಿ ಆಡಿದ ರೀತಿಯಲ್ಲಿ ಆಡಲಿದ್ದೇವೆ. ಆದರೆ, ಕೊನೆಯ ಓವರ್ವರೆಗೂ ಬ್ಯಾಟಿಂಗ್ ಮಾಡಿ, ಡಿಫೆಂಡ್ ಮಾಡಿಕೊಳ್ಳುವಂತಹ ಮೊತ್ತವನ್ನು ದಾಖಲಿಸುವ ಅಗತ್ಯವಿದೆ. ಆದರೆ, ಕಳೆದ ಪಂದ್ಯದಲ್ಲಿ ನಮ್ಮ ಬ್ಯಾಟಿಂಗ್ ಪ್ರದರ್ಶನ ಸರಿಯಾಗಿತ್ತು, 2ನೇ ಪಂದ್ಯದಲ್ಲೂ ಅದೇ ಮಾದರಿಯಲ್ಲಿ ಆಡುತ್ತೇವೆ ಎಂದು ತಿಳಿಸಿದ್ದಾರೆ.