ಹೈದರಾಬಾದ್: ಟೀಮ್ ಇಂಡಿಯಾದಲ್ಲಿ ಆಡಲು ಅವಕಾಶ ಸಿಗುವುದೇ ಒಂದು ಗೌರವ. ಅದರಲ್ಲೂ ವಿಶ್ವಕಪ್ ತಂಡದಲ್ಲಿ ಆಡುವುದು, ದೇಶವನ್ನು ಪ್ರತಿನಿಧಿಸುವುದೆಂದರೆ ಅತ್ಯಂತ ಹೆಮ್ಮೆಯ ವಿಚಾರ. ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ವಿಶ್ವಕಪ್ ಕ್ರಿಕೆಟ್‌ನ ಮಹತ್ವದ ಹಂತದಲ್ಲಿ ತಂಡದಲ್ಲಿ ಸ್ಥಾನ ಸಿಕ್ಕಿದೆ. ಅಕ್ಟೋಬರ್ 19ರಂದು ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾದರು. ಹಾರ್ದಿಕ್ ಬದಲಾಗಿ ಪ್ರಸಿದ್ಧ್ ತಂಡಕ್ಕೆ ಸೇರ್ಪಡೆ ಆಗಿದ್ದಾರೆ.
ವಿಶ್ವಕಪ್ಗೆ ಪ್ರಕಟಿಸಿದ್ದ 18 ಜನ ಸದಸ್ಯರ ತಂಡದಲ್ಲಿ ಕೃಷ್ಣ ಕೂಡಾ ಒಬ್ಬರು. ಏಷ್ಯಾಕಪ್ ಮತ್ತು ವಿಶ್ವಕಪ್ಗೂ ಮುನ್ನ ನಡೆದ ಆಸ್ಟ್ರೇಲಿಯಾ ಸರಣಿಯಲ್ಲೂ ಪ್ರಸಿದ್ಧ್ ತಂಡದ ಭಾಗವಾಗಿದ್ದರು. ಹೀಗಾಗಿ ಹಾರ್ದಿಕ್ ಬದಲಾಗಿ ತಂಡಕ್ಕೆ ನಾಲ್ಕನೇ ವೇಗಿಯಾಗಿ ಪ್ರಸಿದ್ಧ್ ಕಾಣಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಬಸವನಗುಡಿ ಕ್ರಿಕೆಟ್ ಅಕಾಡೆಮಿ, ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ನಲ್ಲಿ ಆಡಿ ಬೆಳೆದ ಪ್ರತಿಭೆ ಪ್ರಸಿದ್ಧ್ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷಣದ ಬಗ್ಗೆ ಬಸವನಗುಡಿ ಕ್ರಿಕೆಟ್ ಅಕಾಡೆಮಿ, ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ ಬಿ.ಕೆ.ರವಿ ಮಾತಾನಾಡಿದ್ದು, ವಿಶ್ವಕಪ್ ತಂಡದಲ್ಲಿ ಪ್ರಸಿದ್ಧ್ ಆಯ್ಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.
"ಬಸವನಗುಡಿ ಕ್ರಿಕೆಟ್ ಅಕಾಡೆಮಿಯಲ್ಲಿ ಆರಂಭದ ದಿನಗಳಲ್ಲಿ ಪ್ರಸಿದ್ಧ್ ತರಬೇತಿ ಪಡೆದರು. ನಂತರ ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್ನಲ್ಲಿ ಆಡಿದರು. ಆಗಲೇ ಪ್ರತಿಭಾವಂತ ಬೌಲರ್ ಆಗಿದ್ದರು. ವಿಶ್ವಕಪ್ ಮೂಲ (18 ಜನ ಸದಸ್ಯರ ತಂಡ) ತಂಡದಲ್ಲಿ ಅವಕಾಶ ಸಿಕ್ಕಾಗಲೇ ಖುಷಿಯಾಗಿತ್ತು. ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ವಿಶ್ವಾಸ ಇತ್ತು. ಅದರಂತೆ ಅವಕಾಶ ಸಿಕ್ಕಿದೆ. ವಿಶ್ವಕಪ್ ತಂಡದಲ್ಲಿ ಇರುವುದರಿಂದ ಕಲಿಯಲು ಹೆಚ್ಚಿನ ಅವಕಾಶ ಸಿಗುತ್ತದೆ" ಎಂದು ಸಂತಸ ಹಂಚಿಕೊಂಡಿದ್ದಾರೆ.
"ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ ಹತ್ತು ವರ್ಷಗಳಿಂದ ಇದ್ದ ಐಸಿಸಿ ಟ್ರೋಫಿಯ ಬರ ನೀಗುವ ಭರವಸೆ ಇದೆ. ಇಂತಹ ಅದ್ಭುತ ತಂಡದಲ್ಲಿ ನಮ್ಮ ಕ್ಲಬ್ನಲ್ಲಿ ಆಡಿದ ಹುಡುಗ ಇರುವುದು ನಮ್ಮ ಸಂಸ್ಥೆಗೆ ಹೆಮ್ಮೆ ತಂದಿದೆ. ಟೀಮ್ ಇಂಡಿಯಾ ಪ್ರಶಸ್ತಿ ಗೆದ್ದರೆ ಆಗುವ ಸಂತೋಷದ ಜೊತೆಗೆ ಆ ಗೆಲುವಿನ ಟೀಮ್ನಲ್ಲಿ ನಮ್ಮ ಹುಡುಗ ಇದ್ದಾ ಎನ್ನುವುದು ಇನ್ನೂ ಖುಷಿಕೊಡುತ್ತದೆ" ಎಂದರು.
ಟೀಮ್ ಇಂಡಿಯಾದ ಆಟದ ಬಗ್ಗೆ ಮಾತನಾಡಿದ ರವಿ, "7 ಪಂದ್ಯದಗಳನ್ನು ತಂಡ ಗೆದ್ದುಕೊಂಡಿದೆ. ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅನುಭವಿಗಳಾಗಿ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಮತ್ತು ಸೂರ್ಯ ಕೂಡಾ ಮಹತ್ವದ ಸಮಯದಲ್ಲಿ ಆಡಿದ್ದಾರೆ. ತಂಡ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿ ಕಾಣಿಸಿಕೊಳ್ಳುತ್ತಿದೆ. ಈ ಬಾರಿಯ ಪ್ರದರ್ಶನ ನೋಡಿದರೆ ವಿಶ್ವಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ" ಎಂದು ಹೇಳಿದ್ದಾರೆ.
ವಿಶೇಷವಾಗಿ ಬೌಲಿಂಗ್ ಬಗ್ಗೆ ಮಾತನಾಡುತ್ತಾ, "ತಂಡದಲ್ಲಿರುವ ತ್ರಿವಳಿ ವೇಗದ ಬೌಲರ್ಗಳಾದ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಎದುರಾಳಿಗಳ ಮೇಲೆ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಹಿಂದೆ ವೇಗದ ಬೌಲರ್ಗಳ ಬಗ್ಗೆ ಮಾತನಾಡುವಾಗ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಅಂತ ಹೊಗಳುತ್ತಿದ್ದೆವು. ಆದರೆ ಟೀಮ್ ಇಂಡಿಯಾ ಬೌಲಿಂಗ್ನಲ್ಲಿ ದೊಡ್ಡ ಬದಲಾವಣೆ ಕಂಡಿದೆ. ಪ್ರಸಿದ್ಧ್ ಸಹ ಈ ಮೂವರ ರೀತಿಯಲ್ಲೇ ತಂಡಕ್ಕೆ ಕೊಡುಗೆ ನೀಡಬಲ್ಲ ಆಟಗಾರ. ಅವಕಾಶ ಸಿಕ್ಕಲ್ಲಿ ಬೆಸ್ಟ್ ಬೌಲಿಂಗ್ ಮಾಡುತ್ತಾರೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
17 ಏಕದಿನ ಪಂದ್ಯದಲ್ಲಿ ಆಡಿರುವ ಪ್ರಸಿದ್ಧ್ ಕೃಷ್ಣ 7 ಮೇಡನ್ ಓವರ್ ಮಾಡಿದ್ದಾರೆ. 25.59ರ ಸರಾಸರಿಯಲ್ಲಿ, 5.61ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದು 29 ವಿಕೆಟ್ ಪಡೆದಿದ್ದಾರೆ. 4/12 ಅವರ ಬೆಸ್ಟ್ ಬೌಲಿಂಗ್ ಆಗಿದೆ.
ಇದನ್ನೂ ಓದಿ: ವಿಶ್ವಕಪ್ನಿಂದ ಹೊರ ಬಿದ್ದ ಹಾರ್ದಿಕ್ ಪಾಂಡ್ಯ.. ಆಲ್‌ರೌಂಡರ್ ಜಾಗದಲ್ಲಿ ಕನ್ನಡಿಗನಿಗೆ ಸ್ಥಾನ