ಡರ್ಬನ್ (ದಕ್ಷಿಣ ಆಫ್ರಿಕಾ): ವಿಶ್ವಕಪ್ಗೆ ಒಂದು ತಿಂಗಳು ಬಾಕಿ ಇರುವಾಗ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ವಿಶ್ವಕಪ್ನ ತಯಾರಿಗಾಗಿ ದಕ್ಷಿಣಆಫ್ರಿಕಾ ಪ್ರವಾಸದಲ್ಲಿರುವ ಆಸಿಸ್ ತಂಡಕ್ಕೆ ಮೊದಲ ಪಂದ್ಯಕ್ಕೂ ಮುನ್ನ ಆಘಾತ ಉಂಟಾಗಿದೆ. ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯಕ್ಕೆ ತುತ್ತಾಗಿದ್ದಾರೆ. ಈ ಕಾರಣ ಅವರು ತವರಿಗೆ ಮರಳುವ ಸಾಧ್ಯತೆಯೂ ಇದೆ.
ಇದೇ (ಆಗಸ್ಟ್) ತಿಂಗಳ 30 ರಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ 3 ಟಿ20 ಮತ್ತು 5 ಏಕದಿನ ಪಂದ್ಯಗಳ ಎರಡು ಸರಣಿ ನಡೆಯಲಿದೆ. ಈ ಸರಣಿ ಸಪ್ಟೆಂಬರ್ 17ಕ್ಕೆ ಮುಕ್ತಾಯವಾಗಲಿದೆ. ನಂತರ ಆಸಿಸ್ ತಂಡ ಭಾರತದ ವಿರುದ್ಧ ಏಕದಿನ ಸರಣಿಯನ್ನು ವಿಶ್ವಕಪ್ಗೆ ಎರಡು ವಾರ ಇರುವಂತೆ ಆಡಲಿದೆ.
ಬುಧವಾರ ನಡೆಯಲಿರುವ ಹರಿಣಗಳ ವಿರುದ್ಧದ ಟಿ20 ಸರಣಿಯ ಮೊದಲಕ್ಕೆ ತಯಾರಿ ನಡೆಸುತ್ತಿರುವಾಗ ಡರ್ಬನ್‌ನಲ್ಲಿ ಮ್ಯಾಕ್ಸ್‌ವೆಲ್ ಪಾದದ ನೋವಿಗೆ ತುತ್ತಾಗಿದ್ದಾರೆ. ಚೇತರಿಕೆಗೆ ಅವರು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಇದೇ ವೇಳೆ ಮ್ಯಾಕ್ಸ್‌ವೆಲ್ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು, ಈ ವೇಳೆ ಕುಟುಂಬದೊಂದಿಗೆ ಸಮಯ ಕಳೆಯುತ್ತಾ, ಚೇತರಿಕೆಯ ಕಡೆ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಗಾಯದ ಬಗ್ಗೆ ಹೆಚ್ಚು ಗಮನ ಹರಿಸಿರುವ ಮ್ಯಾಕ್ಸ್‌ವೆಲ್ ಆದಷ್ಟು ಬೇಗ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ವಿಶ್ವಕಪ್ಗೂ ಮುನ್ನ ಭಾರತದಲ್ಲಿ ನಡೆಯುವ ಏಕದಿನ ಸರಣಿಗೆ ಮರಳುವ ನಿರೀಕ್ಷೆ ಇದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಮಾಹಿತಿ ನೀಡಿದೆ. ಮ್ಯಾಕ್ಸ್‌ವೆಲ್ 128 ಏಕದಿನ ಪಂದ್ಯಗಳನ್ನು ಆಡಿದ್ದು, 33.88 ಸರಾಸರಿ ಮತ್ತು 124.82 ಸ್ಟ್ರೈಕ್ ರೇಟ್‌ನಲ್ಲಿ 3490 ರನ್ ಗಳಿಸಿದ್ದಾರೆ. 5.56 ಎಕಾನಮಿ ರೇಟ್‌ನೊಂದಿಗೆ 60 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ಮ್ಯಾಕ್ಸ್ ವೆಲ್ ಬದಲಾಗಿ ಮ್ಯಾಥ್ಯೂ ವೇಡ್ ತಂಡಕ್ಕೆ ಮರಳಲಿದ್ದಾರೆ. ವೇಡ್ ತಂಡಕ್ಕೆ ಮರಳಿರುವುದರಿಂದ ಜೋಶ್ ಇಂಗ್ಲಿಶ್ ಜೊತೆಗೆ ಮತ್ತೊಬ್ಬ ವಿಕೆಟ್ ಕೀಪರ್ ತಂಡಕ್ಕೆ ಆಯ್ಕೆಯಾಗಿ ಸಿಗಲಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ನಡುವಿನ ಟಿ20 ತಂಡಕ್ಕೆ ಮ್ಯಾಕ್ಸ್‌ವೆಲ್ ಮಾತ್ರವಲ್ಲದೇ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್, ಕ್ಯಾಮರೂನ್ ಗ್ರೀನ್ ಮತ್ತು ಡೇವಿಡ್ ವಾರ್ನರ್ ಸಹ ಗೈರಾಗಿದ್ದಾರೆ.
ತಂಡದ ನಾಯಕ ಪ್ಯಾಟ್ ಕಮಿನ್ಸ್ ಇತ್ತೀಚೆಗೆ ಇಂಗ್ಲೆಂಡ್ನಲ್ಲಿ ನಡೆದ ಆ್ಯಶಸ್ ಸರಣಿಯ ಕೊನೆಯ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಕಮಿನ್ಸ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡುತ್ತಿಲ್ಲ. ಟಿ20 ನಾಯಕರಾದ ಮಾರ್ಷ ಹರಿಣಗಳ ವಿರುದ್ಧ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮ್ಯಾಟ್ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಷ್ಟನ್ ಟರ್ನರ್, ಮ್ಯಾಥ್ಯೂ ವೇಡ್, ಆಡಮ್ ಝಂಪಾ. (ಎಎನ್ಐ)
ಇದನ್ನೂ ಓದಿ: ಕ್ರಿಕೆಟ್‌ನಲ್ಲಿ ಯೋ-ಯೋ ಟೆಸ್ಟ್ ಎಂದರೇನು? ಫೇಲ್ ಆಗಿ ಅವಕಾಶ ಕಳ್ಕೊಂಡ ಆಟಗಾರರು ಇವರು..