ಮುಂಬೈ: ಭಾರತ ತಂಡದ ಮಾಜಿ ವೇಗಿ ಅಜಿತ್ ಅಗರ್ಕರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಇಎಸ್ಪಿನ್ ವರದಿಯ ಪ್ರಕಾರ ರಿಕಿ ಪಾಂಟಿಂಗ್ ಜೊತೆಗೆ ಸಹಾಯಕರಾಗಿ ಮತ್ತು ನಾಯಕ ರಿಷಭ್ ಪಂತ್ , ಬ್ಯಾಟಿಂಗ್ ಕೋಚ್ ಪ್ರವೀಣ್ ಆಮ್ರೆ, ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಇರುವ ಲೀಡರ್ಶಿಪ್ ತಂಡದಲ್ಲೂ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಸಂದರ್ಭದಲ್ಲಿ ಫೀಲ್ಡಿಂಗ್ ಕೋಚ್, ಸಹಾಯಕ ಕೋಚ್ ಆಗಿರುವ ಮೊಹಮ್ಮದ್ ಕೈಫ್ ಮತ್ತು ಅಜಯ್ ರಾತ್ರಾ ಅವರ ಒಪ್ಪಂದವನ್ನು ನವೀಕರಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಕೈಫ್ 2019ರಿಂದ 2021ರವರೆಗೆ ಮತ್ತು ರಾತ್ರಾ 2021ರ ಆವೃತ್ತಿಗಾಗಿ ಫ್ರಾಂಚೈಸಿಗಾಗಿ ಕಾರ್ಯ ನಿರ್ವಹಿಸಿದ್ದರು.
ಪ್ರಸ್ತುತ ಸ್ಟಾರ್ ಸ್ಪೋರ್ಟ್ಸ್ ಬ್ರಾಡ್ಕಾಸ್ಟಿಂಗ್ ತಂಡದಲ್ಲಿರುವ ಅಗರ್ಕರ್ ಶ್ರೀಲಂಕಾ- ಭಾರತ ಸರಣಿ ಮುಗಿಯುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
2007ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಅಗರ್ಕರ್ 2013ರಲ್ಲಿ ನಿವೃತ್ತಿಯಾಗಿದ್ದರು. 44 ವರ್ಷದ ಅಗರ್ಕರ್ಗೆ ಕೋಚ್ ಆಗಿ ಇದೇ ಮೊದಲ ಅಸೈನ್ಮೆಂಟ್ ಆಗಿದೆ. ಮುಂಬೈ ವೇಗಿ ಭಾರತದ ಪರ 58 ಟೆಸ್ಟ್ ವಿಕೆಟ್ ಮತ್ತು 288 ಏಕದಿನ ವಿಕೆಟ್ ಪಡೆದಿದ್ದಾರೆ. 2013ರ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿ ಸ್ಪರ್ಧಾತ್ಮಕ ಕ್ರಿಕೆಟ್ಗೆ ತೆರೆ ಎಳೆದಿದ್ದರು.
ಇದನ್ನೂ ಓದಿ: U19 ವಿಶ್ವಕಪ್ ವೇಳೆ ಭಾರತದ ಯುವಕರು ಎದುರಿಸಿದ ಕಷ್ಟಗಳನ್ನು ಬಿಚ್ಚಿಟ್ಟ ಟೀಮ್ ಮ್ಯಾನೇಜರ್