ನವದೆಹಲಿ: ಅಷ್ಟೇನೂ ಶಕ್ತವಲ್ಲದ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿದ್ದು, ಕ್ರಿಕೆಟ್ ಅಭಿಮಾನಿಗಳ, ವಿಶ್ಲೇಷಕರ ಕೆಂಗಣ್ಣಿಗೆ ಗುರಿಯಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದರ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ಏಕದಿನ ಕ್ರಿಕೆಟ್ ವಿಶ್ವಕಪ್ ಮುಂದಿಟ್ಟುಕೊಂಡು ಇನ್ನೂ ಪ್ರಯೋಗ ನಡೆಸುತ್ತಿರುವ ತಂಡದ ಆಡಳಿತ ಮಂಡಳಿ ಮತ್ತು ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗರು ಹರಿಹಾಯ್ದಿದ್ದಾರೆ.
1983ರ ವಿಶ್ವಕಪ್ ವಿಜೇತ ನಾಯಕ, ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರೂ ಮತ್ತು ಬಿಸಿಸಿಐ ನೀತಿಯನ್ನು ಅಲ್ಲಗಳೆದಿದ್ದಾರೆ. "ನಿಮಗೆ ಟೀಂ ಇಂಡಿಯಾಕ್ಕಿಂತಲೂ ಐಪಿಎಲ್ ಮುಖ್ಯವಾಯಿತೇ?. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ಯಾಕೆ" ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಟೀಂ ಇಂಡಿಯಾ ಬಗ್ಗೆ ಅಸಮಾಧಾನ ವ್ಯಕ್ತಪಡಿರುವ ಲೆಜೆಂಡರಿ ಕ್ರಿಕೆಟರ್, "ಹಣದ ಹೊಳೆ ಹರಿಸುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಗಾಯಗೊಂಡರೂ ಲೆಕ್ಕಿಸದೇ ಭಾಗವಹಿಸುತ್ತೀರಿ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಣ್ಣ ಸಮಸ್ಯೆಯಾದರೂ ವಿಶ್ರಾಂತಿ ಬಯಸಿ ತಂಡದಿಂದ ಹೊರಗುಳಿಯುತ್ತೀರಿ. ನಿಮಗೆ ಆಟದ ಮೇಲೆ ಬದ್ಧತೆ ಇದೆಯೇ?" ಎಂದು ಹಿರಿಯ ಆಟಗಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು.
"ಕ್ರಿಕೆಟ್ನಲ್ಲಿ ಗಾಯ ಸಹಜ. ಹಾಗಂತ ಮಹತ್ವದ ಪಂದ್ಯಗಳಲ್ಲಿ ನೆಪ ಹೇಳಿ ಟೂರ್ನಿಯಿಂದ ಹೊರಗುಳಿಯುತ್ತೀರಿ. ಗಾಯಗೊಂಡಿದ್ದರೂ ಐಪಿಎಲ್ ಟೂರ್ನಿಯನ್ನು ಮಾತ್ರ ತಪ್ಪಿಸಿಕೊಳ್ಳುವುದಿಲ್ಲ. ಆಗ ನಿಮಗೆ ನೆನಪಾಗುವುದಿಲ್ಲವಾ?. ಟೀಂ ಇಂಡಿಯಾ ಪರವಾಗಿ ಬದ್ಧತೆಯಿಂದ ಆಡುವ ಆಟಗಾರರು ಕಡಿಮೆಯಾಗಿದ್ದಾರೆ. ಇದನ್ನು ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ" ಎಂದು ಕಿಡಿಕಾರಿದ್ದಾರೆ.
ಅಷ್ಟಕ್ಕೂ ಬೂಮ್ರಾಗೆ ಏನಾಗಿದೆ?: "ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬೂಮ್ರಾ ಭರವಸೆಯ ಆಟಗಾರರಾಗಿದ್ದರು. ಗಾಯದ ಸಮಸ್ಯೆ ಹೇಳಿ ಅವರು ಒಂದು ವರ್ಷದಿಂದ ತಂಡದಿಂದ ದೂರವಿದ್ದಾರೆ. ವಿಶ್ವಕಪ್ ವೇಳೆಗೆ ಅವರು ಫಿಟ್ ಆದರೆ, ತಂಡಕ್ಕೆ ನೆರವಾಗಲಿದೆ. ಅಷ್ಟಕ್ಕೂ ಅವರಿಗೆ ಆಗಿರುವ ಸಮಸ್ಯೆ ಏನೆಂಬುದನ್ನು ಎಲ್ಲೂ ಹೇಳಿಲ್ಲ. ಅಪಘಾತಕ್ಕೀಡಾಗಿರುವ ವಿಕೆಟ್ ಕೀಪರ್ ರಿಷಬ್ ಪಂತ್ ಇದ್ದಿದ್ದರೆ ವಿಂಡೀಸ್ ಟೆಸ್ಟ್ ಸರಣಿ ಇನ್ನೂ ಚೆನ್ನಾಗಿರುತ್ತಿತ್ತು" ಎಂದು ಹೇಳಿದ್ದಾರೆ.
ಬಿಸಿಸಿಐ ಮೇಲೆ ಗರಂ: "ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳ ಆಯೋಜನೆಯ ವಿಚಾರದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಎಡವುತ್ತಿದೆ. ಆಟಗಾರರ ಕಾರ್ಯಭಾರ ನಿರ್ವಹಣೆಯಲ್ಲಿ ಬಿಸಿಸಿಐ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ಮಂಡಳಿ ಇನ್ನೂ ತಂಡವನ್ನು ಪ್ರಯೋಗಕ್ಕೆ ಒಳಪಡಿಸಿದೆ. ಹೀಗಾದರೆ, ವಿಶ್ವಕಪ್ ಮೇಲೆ ಪರಿಣಾಮ ಬೀರುವುದಿಲ್ಲವೇ" ಎಂದು ಪ್ರಶ್ನಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ 2ನೇ ಏಕದಿನದಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಕಿರಿಯ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ತಂಡ ಕಳಪೆ ಪ್ರದರ್ಶನ ನೀಡಿ ವಿಂಡೀಸ್ ವಿರುದ್ಧ ಸೋಲು ಅನುಭವಿಸಿತ್ತು. ಇದು ಟೀಕೆಗೆ ಗುರಿಯಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದರ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: Yuvaraj Singh: ಸ್ಟುವರ್ಟ್ ಬ್ರಾಡ್ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು, ಅವರ ಸಾಧನೆ ಪ್ರೇರಣಾದಾಯಿ: ಯುವರಾಜ್ ಸಿಂಗ್