ನವದೆಹಲಿ: ಏಕದಿನ ವಿಶ್ವಕಪ್ ಮೇಲೆ ಕಾಲಿಟ್ಟ ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್ ವಿರುದ್ಧ ಭಾರತದಲ್ಲಿ ಎಫ್‌ಐಆರ್ ದಾಖಲಾಗಿದೆ. ಉತ್ತರ ಪ್ರದೇಶದ ಅಲಿಘರ್‌ನ ಆರ್‌ಟಿಐ ಕಾರ್ಯಕರ್ತ ಪಂಡಿತ್ ಕೇಶವ್ ನೀಡಿದ ದೂರಿನ ಮೇಲೆ ದೆಹಲಿ ಗೇಟ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಶ್ವಕಪ್ ಮೇಲೆ ಕಾಲುಗಳ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಿಚೆಲ್ ಮಾರ್ಷ್ ಟ್ರೋಫಿಯನ್ನು ಅವಮಾನಿಸಿದ್ದಾರೆ. 140 ಕೋಟಿ ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕೇಶವ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗಷ್ಟೇ ಟೀಂ ಇಂಡಿಯಾ ಹಿರಿಯ ವೇಗಿ ಶಮಿ ಕೂಡ ಇದೇ ವಿಷಯಕ್ಕೆ ಪ್ರತಿಕ್ರಿಯಿಸಿದ್ದರು. "ಮಿಚೆಲ್ ಹಾಗೆ ಮಾಡಿದ್ದು ನನಗೆ ತುಂಬಾ ನೋವುಂಟು ಮಾಡಿದೆ. ವಿಶ್ವಕಪ್‌ನಲ್ಲಿ ಟ್ರೋಫಿಗಾಗಿ ಹಲವು ತಂಡಗಳು ಸೆಣಸಾಡಿದ್ದವು. ಅಂತಹ ಟ್ರೋಫಿಯನ್ನು ತಲೆಯ ಮೇಲೆ ಹೊತ್ತು ಸಾಗಬೇಕು. ಆದ್ರೆ ಕಪ್ ಮೇಲೆ ಕಾಲಿಟ್ಟಿರುವುದು ಇಷ್ಟವಿಲ್ಲ" ಎಂದು ಶಮಿ ಬೇಸರ ವ್ಯಕ್ತಪಡಿಸಿದ್ದರು.
ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಿಚೆಲ್ ಅವರ ಚಿತ್ರಗಳನ್ನು ಪೋಸ್ಟ್ ಮಾಡಿರುವುದು ಟೀಕೆಗೆ ಕಾರಣವಾಗಿದೆ.
ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಾರ್ಷ್: 13ನೇ ಆವೃತ್ತಿಯ 2023ರ ಏಕದಿನ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಗೆದ್ದ ಆಸ್ಟ್ರೇಲಿಯಾ ಆರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಐತಿಹಾಸಿಕ ಗೆಲುವು ಸಾಧಿಸಿದೆ.
ಮಿಚೆಲ್ ಮಾರ್ಷ್ ಕುಳಿತುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅಲ್ಲದೇ, ಟ್ರೋಪಿಗೆ ಅಗೌರವ ತೋರಿರುವ ಮಾರ್ಷ್ ನಡೆಯನ್ನು ನೆಟ್ಟಿಗರು ಖಂಡಿಸಿದ್ದು, ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ: ವಿಶ್ವಕಪ್ ಮೇಲೆ ಕಾಲಿಟ್ಟು ಕುಳಿತ ಆಸ್ಟ್ರೇಲಿಯಾ ಆಟಗಾರ: ಇನ್ಸ್ಟಾ ಪೋಸ್ಟ್ ವೈರಲ್, ಕ್ರಿಕೆಟ್ ಅಭಿಮಾನಿಗಳು ಗರಂ