ಕೋಲ್ಕತ್ತಾ (ಪಶ್ಚಿಮ ಬಂಗಾಳ): ಭಾರತೀಯ ಕ್ರಿಕೆಟ್ನ ದಾದಾ ಎಂದೇ ಖ್ಯಾತರಾದ ಮಾಜಿ ನಾಯಕ ಸೌರವ್ ಗಂಗೂಲಿ ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯುವ ಬಯಕೆ ಫಲಕೊಡದೆ ಸೌರವ್ ಗಂಗೂಲಿ ನಿರಾಶೆಯಲ್ಲಿದ್ದಾರೆ. ಆದರೆ, ಬೆಂಗಾಲ್ ಟೈಗರ್ನಲ್ಲಿರುವ ಕ್ರಿಕೆಟ್ ಕುರಿತ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ.
ಹೌದು, ಟೀಂ ಇಂಡಿಯಾದ ಸ್ಟಾರ್ ಆಟಗಾರನಾಗಿದ್ದ ಸೌರವ್ ಗಂಗೂಲಿ ಈ ಹಿಂದೆ ತಂಡದಲ್ಲಿ ಇದ್ದಾಗಲೇ ಹಿನ್ನಡೆ ಅನುಭವಿಸಿದ್ದರು. 2006ರಲ್ಲಿ ಸುಮಾರು ಆರು ತಿಂಗಳ ಕಾಲ ದಾದಾರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ, ಜೋಹಾನ್ಸ್ಬರ್ಗ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಿಡಿಸಿದ್ದ 51 ರನ್ಗಳು ಗಂಗೂಲಿ ಸಾಮರ್ಥ್ಯ ಸಾಬೀತು ಪಡಿಸಿದ್ದಲ್ಲದೇ, ತಂಡಕ್ಕೆ ಕಮ್ಬ್ಯಾಕ್ ಆಗುವಂತೆ ಮಾಡಿತ್ತು.
ಇದೀಗ ಬಿಸಿಸಿಐಯಲ್ಲೂ ದಾದಾ ಹಿನ್ನಡೆ ಅನುಭವಿಸಿರಬಹುದು. ಆದರೆ, ಕ್ರಿಕೆಟ್ ಪರವಾಗಿರುವ ಉತ್ಸಾಹವು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ)ಗೆ ಮರಳಿ ಬರುವಂತೆ ಮಾಡಿದೆಯಂತೆ. ಅಕ್ಟೋಬರ್ 31ರಂದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ನಿರೀಕ್ಷೆ ಇದೆ. ಅಕ್ಟೋಬರ್ 22 ರವರೆಗೆ ನಾಮಪತ್ರ ಸಲ್ಲಿಸುವ ಅವಕಾಶ ಇದ್ದು, ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಸಿಎಬಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಯಾರೂ ಶಾಶ್ವತವಾಗಿ ಆಡಲು ಸಾಧ್ಯವಿಲ್ಲ: ಬಿಸಿಸಿಐ ಅಧ್ಯಕ್ಷ ಸ್ಥಾನದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಸೌರವ್ ಗಂಗೂಲಿ
ಏತನ್ಮಧ್ಯೆ, ಚುನಾವಣೆ ನಡೆದರೆ ಮಾತ್ರ ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎರಡೇ ನಾಮಪತ್ರ ಸಲ್ಲಿಸುವ ಅವಕಾಶವನ್ನು ಬಿಡಲು ಅವರು ಬಯಸುವುದಿಲ್ಲ. ಒಂದು ವೇಳೆ ಚುನಾವಣೆ ನಡೆಯದಿದ್ದರೆ ತಾವು ಹೊರಗುಳಿದು, ತಮ್ಮ ಸಹೋದರ ಸ್ನೇಹಾಶಿಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಿದ್ದಾರೆ. ಸದ್ಯ ಸ್ನೇಹಾಶಿಶ್ ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ.
ಇದಲ್ಲದೇ, ಗಂಗೂಲಿ ಪರವಾದ ಬಣದ ಹುದ್ದೆಗಳು ಸಹ ಬಹುತೇಕ ನಿರ್ಧಾರವಾಗಿವೆ. ಸೌರವ್ ಗಂಗೂಲಿ (ಅಧ್ಯಕ್ಷ), ಪ್ರಬೀರ್ ಚಕ್ರವರ್ತಿ (ಕಾರ್ಯದರ್ಶಿ), ದೇಬಬ್ರತ ದಾಸ್ (ಜಂಟಿ ಕಾರ್ಯದರ್ಶಿ), ಸ್ನೇಹಶಿಶ್ ಗಂಗೂಲಿ (ಉಪಾಧ್ಯಕ್ಷ) ಮತ್ತು ನರೇಶ್ ಓಜಾ (ಖಜಾಂಚಿ) ಆಗಲಿದ್ದಾರೆ. ಆದರೆ, ಸ್ನೇಹಶಿಶ್ ಅಧ್ಯಕ್ಷ ಸ್ಥಾನದಿಂದ ಸಂಪೂರ್ಣವಾಗಿ ಹೊರಗುಳಿದಿಲ್ಲ. ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆಯಾದರೆ ಸ್ನೇಹಾಶಿಶ್ ಅಧ್ಯಕ್ಷರಾಗುತ್ತಾರೆ ಎಂದೂ ಮೂಲಗಳು ಹೇಳಿವೆ.
ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಖಚಿತ.. ಸೌರವ್ ಗಂಗೂಲಿ ಮುಂದಿನ ಪಯಣ ಎಲ್ಲಿಗೆ?