ಲಂಡನ್: ಪಾಕಿಸ್ತಾನದ ವೈಟ್ ಬಾಲ್ ಪ್ರವಾಸವನ್ನು ರದ್ದುಗೊಳಿಸುವ ಮೂಲಕ ಇಂಗ್ಲೆಂಡ್ ಪಾಶ್ಚಿಮಾತ್ಯ ಅಹಂಕಾರವನ್ನು ಪ್ರದರ್ಶಿಸಿದೆ. ಆದರೆ, ಅವರಿಗೆ ಶ್ರೀಮಂತ ಮತ್ತು ಶಕ್ತಿಯುತ ಭಾರತದ ಎದುರು ಈ ನಿರ್ಧಾರವನ್ನು ತೆಗೆದುಕೊಳ್ಳಲು ಧೈರ್ಯವಿಲ್ಲ ಎಂದು ವೆಸ್ಟ್ ಇಂಡೀಸ್ ಲೆಜೆಂಡ್ ಮೈಕಲ್ ಹೋಲ್ಡಿಂಗ್ ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ತಂಡ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿ ತವರಿಗೆ ಮರಳಿದ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಮ್ಮ ಪುರುಷ ಮತ್ತು ಮಹಿಳಾ ತಂಡಗಳು ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದ್ದರು. ಭದ್ರತಾ ವ್ಯವಸ್ಥೆ ಮತ್ತು ಆಟಗಾರರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದ್ದರು. ಆದರೆ, ಮೈಕಲ್ ಹೋಲ್ಡಿಂಗ್ " ಇಸಿಬಿಯ ಹೇಳಿಕೆಯನ್ನು ನಾನು ನಂಬಲು ಸಿದ್ಧನಿಲ್ಲ, ಅದು ಸತ್ಯವಲ್ಲ" ಎಂದು ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಟೀಕಿಸಿದ್ದಾರೆ.
2005ರ ಬಳಿಕ ಇಂಗ್ಲೆಂಡ್ ಪುರುಷರ ತಂಡ ಮತ್ತು ಮಹಿಳಾ ತಂಡ ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ, ನ್ಯೂಜಿಲ್ಯಾಂಡ್ ಪ್ರವಾಸ ರದ್ದುಗೊಳಿಸಿದ ಮೂರೇ ದಿನಗಳಲ್ಲಿ ಇಸಿಬಿ ಪಾಕ್ ಪ್ರವಾಸ ರದ್ದುಗೊಳಿಸುವುದಾಗಿ ತಿಳಿಸಿತ್ತು.
ಇಂಗ್ಲೆಂಡ್ ನಿರ್ಧಾರವನ್ನು ಟೀಕಿಸಿರುವ ಹೋಲ್ಡಿಂಗ್ ಪಾಕಿಸ್ತಾನದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಜಾಗದಲ್ಲಿ ಭಾರತ ಇದ್ದಿದ್ದರೆ ಇಂಗ್ಲೆಂಡ್ ಪ್ರವಾಸವನ್ನು ರದ್ದುಗೊಳಿಸುವ ಧೈರ್ಯ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
" ಕೋವಿಡ್ಗೆ ಲಸಿಕೆ ಕಂಡುಹಿಡಿಯುವ ಮೊದಲೇ ಪಾಕಿಸ್ತಾನ 6 - 7 ವಾರಗಳ ಕಾಲ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಅವರು ಇಲ್ಲೇ ಉಳಿದಿದ್ದರು, ಅವರು ಅವರ ಕ್ರಿಕೆಟ್ ಆಡಿ ಗೌರವಕ್ಕೆ ಪಾತ್ರರಾದರು ಮತ್ತು ಇಂಗ್ಲೆಂಡ್ ಬಯಸಿದ ಗೌರವ ತಂದುಕೊಟ್ಟಿದ್ದರು. ಜೊತೆಗೆ ಇಂಗ್ಲೆಂಡ್ ಮರ್ಯಾದೆಯನ್ನು ಕಾಪಾಡಿದ್ದರು.
ಆದರೆ, ಇಂಗ್ಲೆಂಡ್ ತಂಡ ಕೇವಲ 4 ದಿನಗಳ ಪ್ರವಾಸ ಕೈಗೊಳ್ಳಲಾಗಲಿಲ್ಲವೇ? ಅವರು ಈ ರೀತಿ ಭಾರತಕ್ಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಭಾರತ ಶ್ರೀಮಂತ ಮತ್ತು ಪವರ್ಫುಲ್ ಕ್ರಿಕೆಟ್ ದೇಶ ಎಂದು ಹೋಲ್ಡಿಂಗ್ ಹೇಳಿದ್ದಾರೆ.
ಇದನ್ನೂ ಓದಿ:ಸುದೀರ್ಘ ಮಾತುಕತೆಯ ನಂತರ ಆ್ಯಶಸ್ ಪ್ರವಾಸ ಕೈಗೊಳ್ಳಲು ಇಂಗ್ಲೆಂಡ್ ತಂಡದಿಂದ ಒಪ್ಪಿಗೆ : ವರದಿ