ಮುಂಬೈ: ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಕೋವಿಡ್ ನಡುವೆ ಸುಮಾರು ನಾಲ್ಕು ತಿಂಗಳುಗಳ ಕಾಲ ಇಂಗ್ಲೆಂಡ್ ಪ್ರವಾಸದಲ್ಲಿರಲಿದ್ದು, ಇಂಗ್ಲೆಂಡ್ ಸರ್ಕಾರ ತಂಡದ ಸದಸ್ಯರಿಗೆ ಸಿಹಿ ಸುದ್ದಿ ನೀಡಿದೆ. ಇದರಿಂದ ಕೊಹ್ಲಿ ದಂಪತಿ ಸೇರಿದಂತೆ ಹಲವರು ಯುಕೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಸುದೀರ್ಘ ಪ್ರವಾಸ ಮಾಡಲಿರುವ ಟೀಂ ಇಂಡಿಯಾದ ಆಟಗಾರರ ಜೊತೆ ಅವರ ಪತ್ನಿ ಸಹ ಪ್ರಯಾಣ ಮಾಡಬಹುದು ಎಂದು ಅನುಮತಿ ನೀಡಿದೆ. ಕೋವಿಡ್ನಿಂದ ಇದಕ್ಕೆ ಅವಕಾಶ ನೀಡಲು ನಿರಾಕರಿಸಿದ್ದ ಬ್ರಿಟನ್ ಸರ್ಕಾರ, ಕೊನೆ ಗಳಿಗೆಯಲ್ಲಿ ತಂಡದ ಜೊತೆಗೆ ಕುಟುಂಬದವರು ಪ್ರಯಾಣಿಸಬಹುದು ಎಂದು ತಿಳಿಸಿದ್ದರಿಂದ ಹಲವು ಆಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ತಯಾರಿಯಲ್ಲಿರುವ ಭಾರತೀಯ ಪುರುಷ ಮತ್ತು ಮಹಿಳಾ ತಂಡದ ಆಟಗಾರರು ಸದ್ಯ ಮುಂಬೈನಲ್ಲಿ ಕ್ವಾರಂಟೇನ್ ಆಗಿದ್ದು ಇದೇ 3 ರಂದು ಎರಡೂ ತಂಡಗಳು ಒಟ್ಟಿಗೆ ಯುಕೆ ಪ್ರವಾಸ ಮಾಡಲಿವೆ.
ಇದನ್ನೂ ಓದಿ: ಆಡುವುದು ಗೆಲ್ಲುವುದಕ್ಕೋ ಅಥವಾ 5 ದಿನಗಳ ಕಾಲ ಮನರಂಜಿಸುವುದಕ್ಕೋ? ಕೊಹ್ಲಿ ಕಿಡಿ
ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಂಗ್ಲರ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದಕ್ಕೂ ಮುನ್ನ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಇನ್ನು ಭಾರತೀಯ ಮಹಿಳಾ ತಂಡ ಒಂದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ 20 ಆಡಲಿದೆ.
ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಮತ್ತು ಅವರ ಮಗಳು ವಮಿಕಾ ಸೇರಿದಂತೆ ಇತರ ಕ್ರೀಡಾಪಟುಗಳು ಜೂನ್ 3 ರಂದು ಲಂಡನ್ಗೆ ತೆರಳಲಿದ್ದು, ಬಳಿಕ ತಂಡವು ಫೈನಲ್ ಪಂದ್ಯದ ಸ್ಥಳವಾದ ಸೌತಾಂಪ್ಟನ್‌ಗೆ ತೆರಳಲಿದೆ. ಪ್ರೋಟೋಕಾಲ್ ಪ್ರಕಾರ ಯುಕೆಗೆ ತಲುಪಿದ ಬಳಿಕ ಎರಡೂ ತಂಡದ ಆಟಗಾರರು 10 ದಿನಗಳ ಕಡ್ಡಾಯ ಕ್ವಾರಂಟೈನ್ ಪೂರೈಸಬೇಕಾಗುತ್ತದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ ಎಂದು ಮಾಧ್ಯಮವೊಂದು ಸುದ್ದಿ ಮಾಡಿದೆ.