ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯವನ್ನು ಮರುನಿಗದಿಗೊಳಿಸುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪ್ರಸ್ತಾಪವನ್ನು ಭಾರತದ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಸ್ವಾಗತಿಸಿದ್ದಾರೆ.
ಕೊರೊನಾ ಕಾರಣದಿಂದ ಮ್ಯಾಂಚೆಸ್ಟರ್ನಲ್ಲಿ ಇಂದು ನಡೆಯಬೇಕಿದ್ದ 5ನೇ ಟೆಸ್ಟ್ ಅನ್ನು ದಿಢೀರ್ ರದ್ದುಗೊಳಿಸಲಾಗಿದೆ. ಆದರೆ, ಅದರ ಮರುಕ್ಷಣವೇ ಈ ಬಗ್ಗೆ ಚರ್ಚೆ ನಡೆಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಯ ಹಾಗೂ 5ನೇ ಟೆಸ್ಟ್ ಅನ್ನು ಮತ್ತೆ ನಡೆಸುವ ಬಗ್ಗೆ ಗಂಭೀರ ಚರ್ಚೆ ನಡೆಸಿವೆ.
ಇದನ್ನೂ ಓದಿ: 5ನೇ ಟೆಸ್ಟ್ ಪಂದ್ಯ ರದ್ದು: ಮರು ವೇಳಾಪಟ್ಟಿಗೆ ಇಂಗ್ಲೆಂಡ್ ಜೊತೆ ಬಿಸಿಸಿಐ ಬಿಸಿ ಬಿಸಿ ಚರ್ಚೆ
5 ಟೆಸ್ಟ್‌ಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದೆ. ಭಾರತದ ಆಟಗಾರರು ಸೇರಿದಂತೆ ಸಿಬ್ಬಂದಿ ಕಳೆದ ವಾರ ಓವಲ್‌ನಲ್ಲಿ ನಡೆದ 4ನೇ ಟೆಸ್ಟ್ ವೇಳೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಆಗ ಆಟಗಾರರ ವರದಿ ನೆಗೆಟಿವ್ ಬಂದಿತ್ತು. ಆದರೆ, ಮತ್ತೆ ಪರೀಕ್ಷೆಗೊಳಗಾದಾಗ ಪಾಸಿಟಿವ್ ಕಾಣಿಸಿಕೊಂಡಿದೆ. ಹಾಗಾಗಿ, ಇಂದಿನ ಕೊನೆಯ ಟೆಸ್ಟ್ ಅನ್ನು ರದ್ದುಗೊಳಿಸಲಾಗಿದೆ. ಆದರೆ, ರದ್ದಾದ ಪಂದ್ಯವನ್ನು ಮತ್ತೆ ನಡೆಸುವ ಇಂಗಿತ ವ್ಯಕ್ತಪಡಿಸಿದ ಬಿಸಿಸಿಐ ನಿರ್ಧಾರವನ್ನು ಗವಾಸ್ಕರ್ ಸ್ವಾಗತಿಸಿದ್ದಾರೆ.
ಈ ಕುರಿತಾಗಿ ಸೋನಿ ಸ್ಪೋರ್ಟ್ಸ್ ವಾಹಿನಿಯೊಂದರಲ್ಲಿ ಮಾತನಾಡಿದ ಗವಾಸ್ಕರ್, '2008ರಲ್ಲಿ ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ಭಾರತದಲ್ಲಿ ಉಭಯ ತಂಡಗಳ ನಡುವೆ 7 ಪಂದ್ಯಗಳ ಏಕದಿನ ಸರಣಿ ನಡೆಯುತ್ತಿತ್ತು. ಈ ಭೀಕರ ದಾಳಿಯ ನಂತರ ಎರಡು ಏಕದಿನ ಪಂದ್ಯಗಳನ್ನು ರದ್ದು ಮಾಡಲಾಗಿತ್ತು'.
'ನವೆಂಬರ್ 26ರಂದು (ಮುಂಬೈ ಮೇಲೆ ದಾಳಿ ನಡೆದ ದಿನ) ಒಡಿಶಾದ ಕಟಕ್‌ನಲ್ಲಿ ಭಾರತ-ಇಂಗ್ಲೆಂಡ್ ಏಕದಿನ ಪಂದ್ಯ ನಡೆಯುತ್ತಿತ್ತು. ಆದ್ರೆ, ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮುಂದಿನ 2 ಏಕದಿನ ಪಂದ್ಯಗಳನ್ನು ಅನಿವಾರ್ಯವಾಗಿ ರದ್ದುಗೊಳಿಸಲಾಗಿತ್ತು. ಬಳಿಕ ಇಂಗ್ಲೆಂಡ್ ತಂಡ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಮರಳಿತ್ತು. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡ ಪೂರ್ವನಿಗದಿಯಾಗಿದ್ದ 2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತಕ್ಕೆ ವಾಪಸ್ ಬರುವ ಬಗ್ಗೆ ಸಂದೇಹವಿತ್ತು'.
'ಆದರೆ, ಮುಂದಿನ ದಿನಗಳಲ್ಲಿ ಇಂಗ್ಲೆಂಡ್ ತಂಡ ದಾಳಿಯ ಹೊರತಾಗಿಯೂ ಟೆಸ್ಟ್ ಪಂದ್ಯವನ್ನಾಡಲು ಭಾರತಕ್ಕೆ ಬಂದಿತು. ಇಂಗ್ಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳು ಅಹಮದಾಬಾದ್ ಮತ್ತು ಮುಂಬೈನಲ್ಲಿ ನಿಗದಿಯಾಗಿತ್ತು. ಆದ್ರೆ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಂದ್ಯಗಳನ್ನು ಅಹಮದಾಬಾದ್ ಮತ್ತು ಚೆನ್ನೈಗೆ ಸ್ಥಳಾಂತರಿಸಲಾಗಿತ್ತು. ಈ ಸರಣಿಯನ್ನು ಭಾರತೀಯ ತಂಡ 1-0 ಅಂತರದಿಂದ ಗೆದ್ದುಕೊಂಡಿತ್ತು'.
'ಈ ನಿಟ್ಟಿನಲ್ಲಿ ಅಂದು ಕೆವಿನ್ ಪೀಟರ್ಸನ್ ನೇತೃತ್ವದ ತಂಡದ ನಡೆಯನ್ನು ನಾವು ಮರೆಯಬಾರದು. ಒಂದು ವೇಳೆ ಕ್ಯಾಪ್ಟನ್ ಕೆವಿನ್ ನಾವು ಭಾರತಕ್ಕೆ ಟೆಸ್ಟ್ ಪಂದ್ಯವನ್ನಾಡಲು ಹೋಗುವುದಿಲ್ಲ ಎಂದು ಹೇಳಿದ್ದಿದ್ದರೆ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಕೆವಿನ್ ತಂಡಕ್ಕೆ ಧೈರ್ಯ ತುಂಬಿ ಭಾರತಕ್ಕೆ ಬಂದು ಟೆಸ್ಟ್ ಪಂದ್ಯ ಆಡುವಂತೆ ತಂಡದ ಸದಸ್ಯರಿಗೆ ಹುರುಪು ತುಂಬಿದ್ದರು. ಇದರ ಪರಿಣಾಮ, ನಾವು ಅತ್ಯುತ್ತಮ ಟೆಸ್ಟ್ ಸರಣಿಯನ್ನು ಭಾರತದಲ್ಲಿ ಕಂಡೆವು. ಹಾಗಾಗಿ ನಾವು ಇಂಗ್ಲೆಂಡ್ ತೋರಿದ ನಡೆಯನ್ನು ಮರೆಯಬಾರದು. ಕೋವಿಡ್‌ನಿಂದ ರದ್ದಾದ ಪಂದ್ಯವನ್ನು ಭಾರತ ಈ ವರ್ಷ ಆಡಲಿದೆ' ಎಂದು ಗವಾಸ್ಕರ್ ಹೇಳಿದರು.
ಇದನ್ನೂ ಓದಿ: India vs England: ಇಂದು ನಡೆಯಬೇಕಿದ್ದ 5ನೇ ಟೆಸ್ಟ್ ಪಂದ್ಯ ರದ್ದು