ಚೆನ್ನೈ: ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಒಂದು ವರ್ಷದ ಮತ್ತು ಎಂಟು ಟೆಸ್ಟ್ ಇನ್ನಿಂಗ್ಸ್ಗಳ ನಂತರ ಟೆಸ್ಟ್ನಲ್ಲಿ ಶತಕ ಸಿಡಿಸುವ ಮೂಲಕ ಲಯಕ್ಕೆ ಮರಳಿದರು. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಸೆಂಚುರಿ ಬಾರಿಸಿ ತಮ್ಮ 7ನೇ ಶತಕ ಪೂರೈಸಿಕೊಂಡಿದ್ದಲ್ಲದೇ, ಆಂಗ್ಲರ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಮೊದಲ ಟೆಸ್ಟ್ನಲ್ಲಿ ರನ್ ಹೊಡೆಯಲು ಹೆಣಗಾಡಿದ ರೋಹಿತ್ ಶರ್ಮಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅವರು ಫಾರ್ಮ್ನಲ್ಲಿಲ್ಲ. ಬದಲಾಗಿ ಮಯಾಂಕ್ ಅಗರ್ವಾಲ್ ಮತ್ತು ಕೆ.ಎಲ್.ರಾಹುಲ್ರನ್ನು ಆಡಿಸಬೇಕೆಂಬ ಒತ್ತಾಯವೂ ಕೇಳಿ ಬಂದಿತ್ತು. ಮೊದಲ ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳು ಸೇರಿ 18 ರನ್ ಗಳಿಸಿದ್ದರು.
ಇಂದು ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಜರುಗುತ್ತಿರುವ ದ್ವಿತೀಯ ಟೆಸ್ಟ್ನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಟೀಕಿಸುವವರಿಗೆ ತಿರುಗೇಟು ನೀಡಿದರು. 130 ಎಸೆತಗಳಲ್ಲಿ ನೂರರ ಗಡಿ ದಾಟಿದ ಹಿಟ್ಮ್ಯಾನ್, ಅದಕ್ಕೆ 14 ಬೌಂಡರಿಗಳು, 2 ಸಿಕ್ಸರ್ಗಳನ್ನು ಸೇರಿಸಿದ್ದರು.
ಇದನ್ನೂ ಓದಿ...ನಾಯಕನ ಬದಲಾವಣೆ ಬಗ್ಗೆ ಮಸಲಾ ಹಾಕುವ ಅಗತ್ಯವಿಲ್ಲ, ವಿರಾಟ್ ನಮ್ಮ ನಾಯಕ: ಅಂಜಿಕ್ಯ ರಹಾನೆ
2019ರ ಅಕ್ಟೋಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಅದಾದ ನಂತರ ಒಂದು ಅರ್ಧಶತಕ ಹೊರತುಪಡಿಸಿ ಅವರ ಬ್ಯಾಟ್ನಲ್ಲಿ ಒಂದು ಶತಕವೂ ಮೂಡಿ ಬಂದಿರಲಿಲ್ಲ. ಗಾಯ ಮತ್ತು ಕೋವಿಡ್ -19 ಕ್ಯಾರೆಂಟೈನ್‌ನಿಂದಾಗಿ ಶರ್ಮಾ ಕೆಲ ಟೆಸ್ಟ್‌ಗಳನ್ನು ಸಹ ತಪ್ಪಿಸಿಕೊಂಡರು.
ಒಂದೆಡೆ ವಿಕೆಟ್ ಪತನಗೊಂಡರೂ ರೋಹಿತ್ ಮಾತ್ರ ತಂಡಕ್ಕೆ ಉತ್ತಮ ಕೊಡುಗೆ ನೀಡಿ ಬೃಹತ್ ಇನ್ನಿಂಗ್ ಕಟ್ಟುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಆರಂಭದಲ್ಲಿ ಶುಭ್ಮನ್ ಗಿಲ್ ಸೊನ್ನೆ ಸುತ್ತಿದರೆ, ಚೇತೇಶ್ವರ ಪೂಜಾರ 21, ನಾಯಕ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿದರು. ಈ ಮೂರು ವಿಕೆಟ್ಗಳು ಕಳೆದುಕೊಂಡಾಗ ತಂಡದ ಮೊತ್ತ 80 ಇತ್ತು.
ಆಗ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ರೋಹಿತ್ ತಂಡವನ್ನು ಮುನ್ನೆಡೆಸಿದರು. ಅವರಿಗೆ ಉಪನಾಯಕ ಅಜಿಂಕ್ಯ ರಹಾನೆ ಸಾಥ್ ನೀಡಿದರು. ಸದ್ಯ ಭಾರತ 64 ಓವರ್ಗಳಿಗೆ 222ಕ್ಕೆ 3 ವಿಕೆಟ್ ಕಳೆದುಕೊಂಡಿದೆ. ಶತಕ ಬಾರಿಸಿ 200ರತ್ತ ಶರ್ಮಾ ಮುನ್ನುಗ್ಗುತ್ತಿದ್ದರೆ, ರಹಾನೆ 50 ರನ್ ಪೂರೈಸಿದರು. ಇವರಿಬ್ಬರಿಂದ 136 ರನ್ ಜೊತೆಯಾಟ ಮೂಡಿ ಬಂದಿದೆ.