ಚೆನ್ನೈ: ಸತತ ವೈಫಲ್ಯಗಳಿಂದ ಲಯಕ್ಕೆ ಮರಳಿರುವ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಶರ್ಮಾ ಇಂಗ್ಲೆಂಡ್ ವಿರುದ್ಧ ಮೂರು ಮಾದರಿಯಲ್ಲೂ (ಟೆಸ್ಟ್, ಏಕದಿನ, ಟಿ20) ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡಗಳ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಏಕೈಕ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಅಲ್ಲದೆ, ಇಂದು ಟೆಸ್ಟ್ ಕ್ರಿಕೆಟ್ನ 7 ಶತಕ ಬಾರಿಸಿದ್ದು, ಎಲ್ಲವೂ ಭಾರತದಲ್ಲೇ ಮೂಡಿಬಂದಿವೆ. ಆರಂಭದ ಏಳು ಶತಕಗಳು ತವರಿನಲ್ಲೇ ಬಾರಿಸುವ ಮೂಲಕ ವಿಶೇಷ ದಾಖಲೆ ಬರೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿರುವ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಈ ಮೈಲಿಗಲ್ಲು ದಾಟಿದರು.
ಭಾರತದಲ್ಲಿ ನಡೆದ ಪಂದ್ಯಗಳಲ್ಲಿ 200ಕ್ಕೂ ಅಧಿಕ ಸಿಕ್ಸರ್ ಬಾರಿಸಿದ ಮೊದಲ ಭಾರತೀಯನಾಗಿ ರೋಹಿತ್ ಗುರುತಿಸಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿರುವ ರೋಹಿತ್, 16 ಬೌಂಡರ್ ಮತ್ತು 2 ಸಿಕ್ಸರ್ ಬಾರಿಸಿದ್ದಾರೆ. ಈ 2 ಸಿಕ್ಸರ್‌ನೊಂದಿಗೆ ದಾಖಲೆ ನಿರ್ಮಾಣವಾಗಿದೆ.